
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,035 ಜನರಲ್ಲಿ ಕೊರೋನಾ ಕೋವಿಡ್ 19 (Covid-19) ಸೋಂಕು ಕಾಣಿಸಿಕೊಂಡಿದೆ. ಇದರ ಪರಿಣಾಮ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 7,447ಕ್ಕೆ ಏರಿಕೆಯಾಗಿದೆ. ಜತೆಗೆ ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸತ್ತವರ ಸಂಖ್ಯೆ 40. ಸೋಂಕು ಪೀಡಿತರ ಪೈಕಿ 642 ಮಂದಿ ಮಾತ್ರ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1,574 ಮಂದಿಗೆ ಕೊರೊನಾವೈರಸ್ (Coronavirus) ಸೋಕು ತಗುಲಿದೆ. ನಂತರದ ಸ್ಥಾನ ತಮಿಳುನಾಡು- 911, ದೆಹಲಿ- 903, ರಾಜಸ್ಥಾನ- 553, ತೆಲಂಗಾಣ- 473, ಮಧ್ಯಪ್ರದೇಶ- 435, ಉತ್ತರ ಪ್ರದೇಶ- 431, ಕೇರಳ- 364, ಆಂಧ್ರ ಪ್ರದೇಶ- 363, ಗುಜರಾತ್- 308, ಕರ್ನಾಟಕ- 207, ಜಮ್ಮು ಮತ್ತು ಕಾಶ್ಮೀರ- 207, ಹರಿಯಾಣ- 177, ಪಂಜಾಬ್- 132, ಪಶ್ಚಿಮ ಬಂಗಾಳ- 116, ಬಿಹಾರ್- 60, ಒರಿಸ್ಸಾ- 48, ಉತ್ತರಾಖಂಡ- 35, ಅಸ್ಸಾಂ- 29, ಹಿಮಾಚಲ ಪ್ರದೇಶ 28, ಚಂಡೀಗಢ- 18, ಛತ್ತೀಸಗಡ- 18, ಲಡಾಖ್- 15, ಜಾರ್ಖಂಡ್- 14, ಅಂಡಮಾನ್- ನಿಕೋಬಾರ್ ದ್ವೀಪ- 11, ಗೋವಾ- 7, ಪುದುಚೆರಿ- 5, ಮಣಿಪುರ- 2, ತ್ರಿಪುರ-1, ಮಿಜೋರಾಮ್-1 ಮತ್ತು ಅರುಣಾಚಲ ಪ್ರದೇಶದಲ್ಲಿ 1 ಸೋಂಕು ಪ್ರಕರಣಗಳು ವರದಿಯಾಗಿವೆ.
ಲಾಕ್ಡೌನ್ (Lockdown) ಘೋಷಿಸಿ 14 ದಿನಗಳಾದರೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಏತನ್ಮಧ್ಯೆ ಏಪ್ರಿಲ್ 14ರ ನಂತರವೂ ಲಾಕ್ಡೌನ್ ಮುಂದುವರೆಸಬೇಕೇ ಬೇಡವೇ ಎಂಬ ವಿಚಾರವಾಗಿ ಪ್ರಧಾನಿ ಮೋದಿ ಮೊನ್ನೆ ಸರ್ವಪಕ್ಷಗಳ ಸಭೆ ನಡೆಸಿದರು. ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮುಂದುವರೆಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದರು. ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯುತ್ತಿದ್ದು ಸಭೆಯ ಬಳಿಕ ಇವತ್ತು ಅಥವಾ ನಾಳೆ ಪ್ರಧಾನಿ ಮೋದಿ ಲಾಕ್ಡೌನ್ ಮುಂದುವರೆಸುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳ ಸಭೆಗೆ ಎರಡು ದಿನ ಬಾಕಿ ಇರುವಂತೆಯೇ ಒರಿಸ್ಸಾ ಸರ್ಕಾರ ಲಾಕ್ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿತ್ತು. ಆ ಮೂಲಕ ಲಾಕ್ಡೌನ್ ಮುಂದುವರೆಸಿದ ಮೊದಲ ರಾಜ್ಯವಾಗಿತ್ತು. ನಿನ್ನೆ ಪಂಜಾಬ್ ಕೂಡ ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿದೆ. ತೆಲಂಗಾಣದ ಕೆ.ಚಂದ್ರಶೇಖರ್ ರಾವ್, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತಿತರರು ಕೂಡ ಲಾಕ್ಡೌನ್ ಮುಂದುವರೆಸುವಂತೆ ಬಲವಾಗಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಂದುವರೆಸುವ ಸಾಧ್ಯತೆಯೇ ಹೆಚ್ಚಾಗಿದೆ.
ದೇಶದ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಲಾಕ್ಡೌನ್ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರೀ ನಷ್ಟ ಉಂಟಾಗಿದೆ. ಆದರೆ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಂದು ವೇಳೆ ಲಾಕ್ಡೌನ್ ಮುಂದುವರೆಸಿದರೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೆಲವು ವಲಯಗಳನ್ನು ನಿರ್ಬಂಧಮುಕ್ತಗೊಳಿಸಬೇಕು. ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ, ಉಳಿದ ಎಲ್ಲ ಅಂತರರಾಜ್ಯ ಸಂಪರ್ಕ ಸೇವೆ ನಿರ್ಬಂಧ ಮುಂದುವರೆಸಬೇಕು ಎಂಬ ಸಲಹೆಗಳು ಕೇಳಿಬರುತ್ತಿವೆ. ಎಲ್ಲವನ್ನೂ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
Comments are closed.