
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ನಿರ್ಧಾರದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೆ 14ರ ಬಳಿಕ ರಾಜ್ಯದ್ಯಂತ ಲೌಕ್ ಡೌನ್ ಮುಂದುವರೆಸಬೇಕಾ ಅಥವಾ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮುಂದುವರೆಸಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿ ಸಚಿವರೊಂದಿಗೆ ಚರ್ಚೆ ನಡೆಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪರೋಕ್ಷವಾಗಿ ಲಾಕ್ ಡೌನ್ ವಿಸ್ತರಣೆ ಸುಳಿವು ನೀಡಿದರು.
ಲಾಕ್ ಡೌನ್ ಒಂದು ಹಂತಕ್ಕೆ ಬರಬೇಕಾದರೆ ಏ.14ರವರೆಗೆ ಜನತೆ ಯಾರೂ ಮನೆಯಿಂದ ಹೊರಬರಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಮಾರಕ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕನಿಷ್ಟ 15 ದಿನಗಳವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು ಎಂಬುದಾಹಗಿ ಹಲವು ಸಚಿವರು ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.
ಇದೆ ಏಪ್ರಿಲ್ 11ರಂದು ಪ್ರಧಾನಿ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆಯೋ ಅದರ ಬಳಿಕ ರಾಜ್ಯದಲ್ಲಿ ಮುಂದೇನು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಹೀಗಾಗಿ ಎರಡು ತಿಂಗಳವರೆಗೆ ಪಡಿತರ ವಿತರಿಸುವಂತೆ ಸೂಚಿಸಲಾಗಿದೆ ಎಂದರು.
ಇನ್ನು ರಾಜ್ಯದ ಎಲ್ಲಾ ಸಚಿವರ ಹಾಗೂ ಶಾಸಕರ ವೇತನವನ್ನು ಶೇ. 30ರಷ್ಟು ಕಡಿತಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಸಂಬಂಧ ಶೀಘ್ರದಲ್ಲೇ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಅವರು ತಿಳಿಸಿದ್ದಾರೆ. ಅಲ್ಲದೆ ಶಾಸಕರ ಮತ್ತು ಸಚಿವರ ಶೇ. 30ರಷ್ಟು ವೇತನ ಕಡಿತಗೊಳಿಸುವುದರಿಂದ ಸುಮಾರು 15 ಕೋಟಿ ರೂಪಾಯಿಯನ್ನು ಕೊವಿಡ್-19 ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
Comments are closed.