ರಾಷ್ಟ್ರೀಯ

ಕೊರೋನಾ ಸೋಂಕು ಭೀತಿಯಿಂದ ಹೆತ್ತ ತಾಯಿಯ ಶವವನ್ನು ಅಂತ್ಯಸಂಸ್ಕಾರ ನೆರವೇರಿಸಲು ನಿರಾಕರಿಸಿದ ಪುತ್ರ !

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್​ನಿಂದ ಪಂಜಾಬ್​ನಲ್ಲಿ 69 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಆದರೆ, ಅಮ್ಮನಿಂದ ತನಗೂ ಕೊರೋನಾ ಸೋಂಕು ತಗುಲುತ್ತದೆ ಎಂಬ ಭೀತಿಯಿಂದ ಆ ಶವವನ್ನು ಸ್ವೀಕರಿಸಿ, ಅಂತ್ಯಸಂಸ್ಕಾರ ನೆರವೇರಿಸಲು ಮಗರಾಯ ಒಪ್ಪದ ಅಮಾನವೀಯ ಘಟನೆ ನಡೆದಿದೆ.

ಪಂಜಾಬ್​ನ ಶಿಮ್ಲಾಪುರಿ ಗ್ರಾಮದ 69 ವರ್ಷದ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ, ಆಕೆಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಮಾ. 31ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೊರೋನಾದಿಂದ ಭಾನುವಾರ ಸಾವನ್ನಪ್ಪಿದ್ದರು. ಆದರೆ, ಕೊರೋನಾದಿಂದ ಸಾವನ್ನಪ್ಪಿದ ಆಕೆಯ ಮೃತದೇಹವನ್ನು ನೋಡಲು ಕೂಡ ಆಕೆಯ ಮನೆಯವರು ಹತ್ತಿರ ಬರಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರೂ ಅವರು ಆ ಶವವನ್ನು ಸ್ವೀಕರಿಸಲು ಒಪ್ಪಲಿಲ್ಲ. ಒಂದುವೇಳೆ ಆ ಶವವನ್ನು ತೆಗೆದುಕೊಂಡು ಹೋಗಿ, ಅಂತ್ಯಸಂಸ್ಕಾರ ನೆರವೇರಿಸಿದರೆ ಆಗ ತಮಗೂ ಕೊರೋನಾ ತಗುಲಬಹುದು ಎಂಬ ಆತಂಕದಲ್ಲಿ ಆ ಮಹಿಳೆಯ ಮಕ್ಕಳು ಅಂತ್ಯಸಂಸ್ಕಾರಕ್ಕೆ ಒಪ್ಪಲಿಲ್ಲ.

ಅಂತ್ಯಕ್ರಿಯೆ ಮಾಡಲು ಅಗತ್ಯ ಸೌಲಭ್ಯಗಳನ್ನು ನೀಡುತ್ತೇವೆ. ಜೊತೆಗೆ ಸೋಂಕು ನಿಮಗೆ ತಗುಲದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರೂ ಆಕೆಯ ಮಗ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಇದನ್ನು ಕಂಡು ನಮಗೆ ಆಘಾತವಾಯಿತು. ಕೊನೆಗೆ ಜಿಲ್ಲಾಡಳಿತದ ಕಡೆಯಿಂದ ಅಂತ್ಯಕ್ರಿಯೆ ಮಾಡಬೇಕಾಯಿತು. ಜಿಲ್ಲಾಡಳಿತದಿಂದ ಸೋಮವಾರ ರಾತ್ರಿ ಕೊರೊನಾ ಸೋಂಕಿತಳ ಅಂತ್ಯಕ್ರಿಯೆ ಮಾಡಿದ್ದೇವೆ. 100 ಮೀಟರ್ ದೂರದಲ್ಲಿ ನಿಂತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಎಂದು ಜಿಲ್ಲಾಧಿಕಾರಿ ಇಕ್ಬಾಲ್ ಸಿಂಗ್ ಸಂಧು ತಿಳಿಸಿದ್ದಾರೆ.

Comments are closed.