ಕರಾವಳಿ

ಮಂಗಳೂರಿನಲ್ಲಿ ಲಾಕ್‌ ಡೌನ್’ ಆದೇಶ ಉಲ್ಲಂಘಿಸಿದ ಏಳು ಮಂದಿ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್. 25 : ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದ.ಕ.ಜಿಲ್ಲೆಯಾದ್ಯಂತ ಸೆಕ್ಷನ್ 144 ಲಾಕ್ ಡೌನ್ ಜಾರಿಗೊಳಿಸಿದ್ದು, ಸೆಕ್ಷನ್ 144 ಮತ್ತು ಲಾಕ್ ಡೌನ್ ಆದೇಶಗಳನ್ನು ಉಲ್ಲಂಘಿಸಿದ ಏಳು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಾರಕ ಕೊರೊನಾ ಸೋಂಕು ದೇಶ ವ್ಯಾಪ್ತಿ ಆತಂಕ ಸೃಷ್ಟಿಸಿದೆ. ಮಾರಕ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು,  ಮಾ.31ರವರೆಗೆ ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಗೆ ಸರ್ಕಾರ ಆದೇಶ ನೀಡಿದೆ. ಈ ನಡುವೆ ಮಂಗಳೂರಿನಲ್ಲಿ ಆದೇಶ ಉಲ್ಲಂಘಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲದ ಇನ್ ಲ್ಯಾಂಡ್ ಇನ್ಫಲಾ ನಿವಾಸಿ ಸಿದ್ಧಿಕ್, ತೊಕ್ಕೊಟ್ಟು ನಿವಾಸಿ ವಿನಯ್, ಹಾಸನದ ದಿನ್ನೆಕೊಪ್ಪಲುವಿನ ಜಮಿಸ್ (45) ತರಿಕೇರಿಯ ವಿಮೇಶ್(30) ಉತ್ತರ ಪ್ರದೇಶದ ಪ್ರಸ್ತುತ ಕುದ್ರೋಳಿಯಲ್ಲಿ ನೆಲೆಸಿರುವ ಅಮೀರ್ ಹಾಜಿ ಅನ್ಸರಿ, ರಾಜಸ್ತಾನ ಮೂಲದ ಪ್ರಸ್ತುತ ಕುದ್ರೋಳಿಯಲ್ಲಿ ನೆಲೆಸಿರುವ ಬಾಲರಾಮ್ ಚೌಧರಿ(32) ಅಸ್ಸಾಂ ಮೂಲದ ಪ್ರಸ್ತುತ ಬಂದರು ಅಜಾಧಿ ಸ್ಟೀಲ್ ನ ರಾಹುಲ್ ಪಾಂಡೆ(18) ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‌ ಡೌನ್’ ನಿರ್ಲಕ್ಷಿಸಿದರೆ ಬಂಧನ:

ಕೊರೋನಾವೈರಸ್ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರವು ದ.ಕ.ಜಿಲ್ಲೆಯಲ್ಲಿ ಲಾಕ್‌ ಡೌನ್ ಘೋಷಿಸಿದೆ. ಜಿಲ್ಲಾಡಳಿತವೂ ಸೆ.144ನ್ನು ವಿಧಿಸಿದೆ. ತುರ್ತು ಕಾರ್ಯ ಹೊರತುಪಡಿಸಿ ಯಾರೂ ಹೊರಗೆ ಬರಬಾರದು. ಹಾಗಾಗಿ ಎಲ್ಲರೂ ತಮ್ಮ ಮನೆಗಳಲ್ಲೇ ಇರಬೇಕು. ಒಂದು ವೇಳೆ ಲಾಕ್‌ ಡೌನ್‌ನ್ನು ನಿರ್ಲಕ್ಷಿಸಿದರೆ ಅಂತಹವರ ವಿರುದ್ಧ ಸೆ.188, ಸೆ.269, ಸೆ.270ರ ಅನ್ವಯ ಪ್ರಕರಣ ದಾಖಲಿಸಲಾಗುವುದು. ಅಗತ್ಯವಿದ್ದರೆ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟಿರುವ ಅವರು, ಕೊರೋನ ವೈರಸ್‌ ಗೆ ಸಂಬಂಧಿಸಿ ಸರಕಾರದ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ. ಹಾಗಾಗಿ ಯಾರೂ ಇದನ್ನು ಲಘುವಾಗಿ ಪರಿಗಣಿಸಬಾರದು.

ಈಗಾಗಲೆ ಮಸೀದಿ, ದೇವಸ್ಥಾನ, ಚರ್ಚ್‌ನಲ್ಲಿ ಪ್ರಾರ್ಥನೆಗಳನ್ನು ನಿಲ್ಲಿಸಲು ಧರ್ಮಗುರುಗಳಲ್ಲಿ ಮನವಿ ಮಾಡಿದ್ದೇವೆ. ಅವರು ಕೂಡ ಸ್ಪಂದಿಸಿದ್ದಾರೆ. ಎಲ್ಲರೂ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ ಸಮಾಜದ ಸ್ವಾಸ್ಥ ಕಾಪಾಡಲು ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಹರ್ಷ ಮನವಿ ಮಾಡಿದ್ದಾರೆ.

Comments are closed.