ಕರಾವಳಿ

ಮಾ.31ರವರೆಗೆ ಸರ್ಕಾರಿ ಕಚೇರಿಯಲ್ಲಿ ಕೆಲವು ಸೇವೆಗಳು ಸ್ಥಗಿತ : ಯಾವೂದೆಲ್ಲಾ ಬಂದ್ – ಇಲ್ಲಿದೆ ವಿವರ

Pinterest LinkedIn Tumblr

ಮಂಗಳೂರು : “ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ, ಸರ್ಕಾರಿ ಕಚೇರಿಯಲ್ಲಿ ಜನ ಹೆಚ್ಚಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸೇವೆಗಳಿಗೆ ಮಾ.31ರವರೆಗೆ ನಿರ್ಬಂಧ ವಿಧಿಸಲಾಗಿದೆ”

ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ಸರಕಾರಿ ಕಚೇರಿಗಳಿಗೆ ತೆರಳುತ್ತಿರುವ ಸಂದರ್ಭ ಹೆಚ್ಚು ಜನಸಂದಣಿ ಕೂಡುತ್ತಿದೆ. ಕೊರೋನ ಭೀತಿಯಿಂದಾಗಿ ಸರಕಾರಿ ಇಲಾಖೆಗಳ ಬಹುತೇಕ ಸೇವೆಗಳನ್ನು ಮಾ.31ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು,”ಸಾರ್ವಜನಿಕ ಸರ್ಕಾರದ ವಿವಿಧ ಸೇವೆಗಳನ್ನು ಪಡೆಯುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಕಚೇರಿಗೆ ಭೇಟಿ ನೀಡುವುದು, ಸಾರ್ವಜನಿಕರು ಏಕ ಕಾಲದಲ್ಲಿ ಒಟ್ಟಿಗೆ ಸೇರುವಂತಹ ಸಂದರ್ಭ ಉಂಟಾಗುವುದರಿಂದ ವೈರಾಣು ಹರಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ” ಎಂದು ಅವರು ತಿಳಿಸಿದ್ಧಾರೆ.

ಆಸ್ಪತ್ರೆ, ಮೆಡಿಕಲ್, ಬ್ಯಾಂಕ್, ಅಗ್ನಿಶಾಮಕ, ಪೊಲೀಸ್, ಕುಡಿಯುವ ನೀರು ಸರಬರಾಜು, ದೀನಸಿ ಅಂಗಡಿಗಳನ್ನು ಹೊರತುಪಡಿಸಿ ಹೆಚ್ಚು ಜನಸೇರುವ ಎಲ್ಲ ಸರಕಾರಿ ಇಲಾಖೆಗಳ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ ಎಂದರು.

ಉಪನೋಂದಣಾಧಿಕಾರಿಗಳ ಕಚೇರಿಯ ಸ್ಥಿರಾಸ್ತಿ ನೋಂದಣಿ ಸೇವೆ, ನಗರ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಪಂ ವ್ಯಾಪ್ತಿಯ ಖಾತೆ, ಸಾರ್ವಜನಿಕ ಹರಾಜು, ಗ್ರಾಮಸಭೆ, ಇತರ ಪರವಾನಿಗೆ, ಜನನ-ಮರಣ ಪ್ರಮಾಣಪತ್ರ ವಿತರಿಸುವ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕಿಂಗ್ ಹೊತರುಪಡಿಸಿ ಸಹಕಾರಿ ಸಂಘಗಳ ಸೇವೆಗಳು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಯ ಲ್ಲಿನ ಸೇವೆಗಳು (ರೈತ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣ, ಇತರ ತುರ್ತು ವಿಷಯಕ್ಕೆ ಅನ್ವಯವಿಲ್ಲ) ಸ್ಥಗಿತಗೊಳ್ಳಲಿವೆ ಎಂದು ಹೇಳಿದರು.

“ತುರ್ತು ಸೇವೆಗಳಾದ ಬ್ಯಾಂಕ್‌‌, ಅಂಚೆ ಕಚೇರಿ, ಪೊಲೀಸ್‌‌‌ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್‌‌ನೆಟ್‌ ಸೇವೆಗಳು, ಕೆಎಸ್‌ಆರ್‌ಟಿಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು, ಕುಡಿಯು ನೀರು, ವಿದ್ಯುತ್‌‌‌‌ಚ್ಛಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ದಿನಸಿ/ಹಣ್ಣು/ತರಕಾರಿ/ಮಾರುಕಟ್ಟೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳಿಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿದ್ದಾರೆ.

“ಈ ಸೇವೆಗಳು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ, ಕಛೇರಿಗಳಿಗೆ ರಜೆ ಘೋಷಣೆಯಾಗಿರುವುದಿಲ್ಲ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗದವರು ಎಂದಿನಂತೆ ಕಛೇರಿಯಲ್ಲಿ ಲಭ್ಯವಿದ್ದು ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಗೈರು ಹಾಜರಾದಲ್ಲಿ ಅಥವಾ ಅನಧಿಕೃತವಾಗಿ ಕಛೇರಿಯನ್ನು ತೆರೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Comments are closed.