ಕರಾವಳಿ

ಮಾ. 31ರೊಳಗೆ ಬಿಎಸ್-4 ವಾಹನಗಳ ನೋಂದಣಿ ಕಡ್ಡಾಯ ; ತಪ್ಪಿದ್ದಲ್ಲಿ ಸೂಕ್ತ ಕ್ರಮ

Pinterest LinkedIn Tumblr

ಮಂಗಳೂರು ಮಾರ್ಚ್ 15 ; ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರ ಮಾಲಿನ್ಯ ಕಡಿಮೆ ಗೊಳಿಸಲು ಎಪ್ರಿಲ್ 1ರಿಂದ ಭಾರತ್ ಸ್ಟೇಜ್-6 (ಬಿಎಸ್-6) ವಾಹನಗಳನ್ನು ಮಾತ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಲಾಗುವುದು.

ಸವೋಚ್ಛ ನ್ಯಾಯಾಲಯ ಹಾಗೂ ಸಾರಿಗೆ ಆಯುಕ್ತರ ಆದೇಶದ ಅನ್ವಯ ಎಪ್ರಿಲ್ 1 ರಿಂದ ಭಾರತ್ ಸ್ಟೇಜ್-4 (ಬಿಎಸ್-4) ಮಾಪನದ ವಾಹನ ಮಾರಾಟ ಹಾಗೂ ನೋಂದಣಿ ಮಾಡುವಂತಿಲ್ಲ. ಹೀಗಾಗಿ ಬಿಎಸ್-4 ಮಾಪನದ ವಾಹನಗಳನ್ನು ಖರೀದಿಸಿ, ಇದುವರೆಗೂ ನೋಂದಣಿ ಮಾಡಿಸಿಕೊಳ್ಳದೇ ಇರುವವರು ವಾಹನಗಳ ದಾಖಲೆಗಳನ್ನು ಸಲ್ಲಿಸಿ ಮಾ31ರೊಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಜಿಲ್ಲೆಯಲ್ಲಿ ಹಲವು ಜೆ.ಸಿ.ಬಿ, ಎಕ್ಸವೇಟರ್, ಕ್ರೇನ್ ಹಾಗೂ ಇನ್ನಿತರ ಸಾರಿಗೆ/ಖಾಸಗಿ ವಾಹನಗಳು ಇದುವರೆಗೂ ನೋಂದಾಯಿಸದೇ ಇರುವುದು ಗಮನಕ್ಕೆ ಬಂದಿದೆ. ಅಂತಹ ವಾಹನಗಳ ಮಾಲೀಕರು, ತಮ್ಮ ವಾಹನಗಳ ದಾಖಲಾತಿ ಸಲ್ಲಿಸಿ, ಮಾರ್ಚ್ 31ರೊಳಗೆ ನೋಂದಾಯಿಸಿಕೊಳ್ಳಬೇಕು.

ಎಪ್ರಿಲ್ 1 ರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಭಾರತ್-ಸ್ಟೇಜ್-6(ಬಿಎಸ್6) ವಾಹನಗಳನ್ನು ಮಾತ್ರ ನೋಂದಣಿ ಮಾಡಿಕೊಳ್ಳಲಾಗುವುದು. ಈಗಾಗಲೇ ತಾತ್ಕಾಲಿಕ ನೋಂದಣಿ ಹೊಂದಿದ್ದರೂ ಸಹ ಅಂತಹ ವಾಹನಗಳನ್ನು ಮಾರ್ಚ್ 31ರೊಳಗೆ ನೋಂದಾಯಿಸಿಕೊಳ್ಳಬೇಕು.

ನಂತರ ನೋಂದಣಿ ರಹಿತ ಭಾರತ್ ಸ್ಟೇಜ್-4 ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ ರಾಮಕೃಷ್ಣ ರೈ ಇವರ ಪ್ರಕಟಣೆ ತಿಳಿಸಿದೆ.

Comments are closed.