ಕರಾವಳಿ

ಪ್ರಶ್ನೆ ಮಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ :ನಿರೂಪಕಿ ಸುಕನ್ಯಾ

Pinterest LinkedIn Tumblr

ಮಂಗಳೂರು  : ಪ್ರಶ್ನೆ ಮಾಡುತ್ತಾ ಕುಳಿತುಕೊಳ್ಳುವುದರಿಂದ ಯಾವುದೇ ಸಮಸ್ಯೆ ಬಗೆ ಹರಿಯುವುದಿಲ್ಲ. ಪ್ರಶ್ನೆಗಳಿಗೆ ಉತ್ತರವಾಗಿ ಬೆಳೆಯುವುದೇ ಮಹಿಳಾ ತಾಕತ್ತು ಎಂದು ಟಿವಿ9 ಸುದ್ದಿವಾಹಿನಿಯ ನಿರೂಪಕಿ ಸುಕನ್ಯಾ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪುರಭವನದಲ್ಲಿ ನಡೆದ ಪತ್ರಕರ್ತರ35ನೇ ರಾಜ್ಯ ಸಮ್ಮೇಳನದ ಎರಡನೇ ದಿನವಾದ ರವಿವಾರ *ಮಾಧ್ಯಮ ಮತ್ತು ಮಹಿಳೆ* ಗೋಷ್ಠಿಯನ್ನು ಅವರು ಉದ್ಘಾಟಿಸಿದರು.

ಮಹಿಳಾಪರ ಧ್ವನಿ ಎಂದರೆ ಹೋರಾಟ, ಪ್ರಶ್ನಿಸುವುದು ಎಂದಂದುಕೊಂಡರೆ ತಪ್ಪು. ಮಹಿಳಾ ಮೀಸಲಾತಿ, ಮಹಿಳಾ ಹಕ್ಕುಗಳನ್ನು ಪ್ರಶ್ನಿಸುತ್ತಾ ಕುಳಿತುಕೊಳ್ಳುವುದರಿಂದ ಪ್ರಯೋಜನ ಶೂನ್ಯ. ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಿದಾಗ ಮಾತ್ರ ಹೋರಾಟಗಳು ಸಾರ್ಥಕವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತೆ ಶ್ರೀದೇವಿ ಕಳಸದ ಮಾತನಾಡಿ, ಸಮಾಜದ ಎಲ್ಲ ಸ್ತರಗಳನ್ನು ಒಳಗೊಳ್ಳುವ ಅವಕಾಶವನ್ನು ಪತ್ರಿಕೋದ್ಯಮ ನೀಡಿದೆ. ಪ್ರೀತಿ, ಶ್ರದ್ಧೆಯಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣತೆ ಸಾಧ್ಯ ಎಂದರು.

ಮಂಗಳೂರು ಆಕಾಶವಾಣಿಯ ಉಷಾಲತಾ ಸರಪಾಡಿ ಮಾತನಾಡಿ, ಗಂಡು-ಹೆಣ್ಣೆಂಬ ಬೇದಭಾವ ತೊಡೆದು ಹಾಕಿ ಸಮಾನವಾಗಿ ಮುನ್ನಡೆಯಬೇಕು. ಮಾಧ್ಯಮ ಕ್ಷೇತ್ರದಲ್ಲೂ ಈ ಕೆಲಸ ಆಗಬೇಕು. ಬಾಹ್ಯವಾಗಿ ಒಳಗೊಳ್ಳುವಿಕೆ ಇದ್ದರಷ್ಟೇ ಸಾಲದು. ಅಂತರಂಗದೊಳಗೂ ಈ ಸ್ವೀಕೃತಿಯನ್ನು ಒಪ್ಪಬೇಕು ಎಂದು ಆಶಿಸಿದರು.

ಆಕಾಶವಾಣಿಯ ನಿಲಯ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಕರ್ನಾಟಕದ ಕೀರ್ತಿ ಶೇಖರ್, ಆಕಾಶವಾಣಿಯ ಸವಿತಾ ಶಿವಕುಮಾರ್, ಪತ್ರಕರ್ತೆ ಮೇಘಾ ಎಲಿಗಾರ್ ಮಾತನಾಡಿದರು‌.

ಹುಬ್ಬಳ್ಳಿ ಪ್ರಜಾವಾಣಿ ಸ್ಥಾನಿಕ ಸಂಪಾದಕಿ ಎಸ್. ರಶ್ಮಿ ಪ್ರಸ್ತಾವನೆಗೈದರು. ಉದಯವಾಣಿ ವರದಿಗಾರರಾದ ಧನ್ಯಾ ಬಾಳೆಕಜೆ ಸ್ವಾಗತಿಸಿದರು. ವಾರ್ತಾಭಾರತಿ ವರದಿಗಾರರಾದ ಸತ್ಯವತಿ ವಂದಿಸಿದರು. ನಮ್ಮ ಕುಡ್ಲ ವಾಹಿನಿಯ ನಿರೂಪಕಿ ಪ್ರಿಯಾ ಹರೀಶ್ ನಿರೂಪಿಸಿದರು.

Comments are closed.