ರಾಷ್ಟ್ರೀಯ

ಬಾಲಕಿ ಅತ್ಯಾಚಾರಗೈದು ಮರಕ್ಕೆ ನೇತು ಹಾಕಿದ 7 ವಿದ್ಯಾರ್ಥಿಗಳ ಬಂಧನ!

Pinterest LinkedIn Tumblr


ತೇಜ್’ಪುರ್: ಕಷ್ಟಪಟ್ಟು ಕಲಿತು ವಿದ್ಯಾವಂತರಾಗಿ ಸಮಾಜದಲ್ಲಿ ಗೌರವಯುತ ಬದುಕು ಬಾಳಬೇಕಿದ್ದ ವಿದ್ಯಾರ್ಥಿಗಳು, ಅತ್ಯಾಚಾರದಂತ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಾರೆ ಎಂದರೆ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಚಿಂತಿಸಬೇಕಾದ ಅಗತ್ಯ ಇದೆ ಎಂದೇ ಅರ್ಥ.

10ನೇ ತರಗತಿ ಪಾಸಾಗಿ ಉಜ್ವಲ ಭವಿಷ್ಯದತ್ತ ಮುನ್ನಡೆಯಬೇಕಾಗಿದ್ದ ಏಳು ವಿದ್ಯಾರ್ಥಿಗಳು, ಬಾಲಕಿಯೊಬ್ಬಳ ಮೇಲೆ ಗುಂಪು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಇಲ್ಲಿನ ಬಿಸ್ವಾಂತ್ ಜಿಲ್ಲೆಯ ಚಕ್ಲಾ ಎಂಬ ಗ್ರಾಮದಲ್ಲಿ ಬಾಲಕಿಯನ್ನು ಪಾರ್ಟಿ ನೆಪದಲ್ಲಿ ಮನೆಗೆ ಕರೆದು ಆಕೆಯ ಮೇಲೆ ಏಳು ಬಾಲಕರು ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರದ ಬಳಿಕ ಆಕೆಯನ್ನು ಸಮೀಪದ ಕಾಡಿನ ಮರವೊಂದಕ್ಕೆ ನೇಣು ಹಾಕಿ ಕೊಲೆ ಮಾಡಿದ್ದಾರೆ.

ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಬಾಲಕಿಯ ಮೇಲೆ ಗುಂಪು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಶುಕ್ರವಾರ(ಫೆ.28) ರಾತ್ರಿಯೇ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದ್ದು, ಮರುದಿನ ಬೆಳಗ್ಗೆ ಅಂದರೆ ಶನಿವಾರ(ಫೆ.29) ಸಮೀಪದ ಕಾಡಿನ ಮರವೊಂದರ ಮೇಲೆ ನೇತಾಡುತ್ತಿದ್ದ ಬಾಲಕಿಯ ಶವ ಪತ್ತೆಯಾಗಿದೆ.

ಒಟ್ಟಿನಲ್ಲಿ ಭವಿಷ್ಯದ ಭಾರತದ ಉತ್ತಮ ಪ್ರಜೆಗಳಾಗಬೇಕಿದ್ದ ಈ ವಿದ್ಯಾರ್ಥಿಗಳು ಜೀವವೊಂದಕ್ಕೆ ಚಿತ್ರಹಿಂಸೆ ನೀಡಿ ಕೊಂದು ಜೈಲು ಸೇರಿರುವುದು ವಿಪರ್ಯಾಸವೇ ಸರಿ.

Comments are closed.