ಕರ್ನಾಟಕ

ಅಕ್ರಮ ಬಿಪಿಎಲ್‌ ಪಡಿತರ ಚೀಟಿಗೆ ಕಡಿವಾಣ ಹಾಕಲು ಆಧಾರ್‌ ಕಾರ್ಡ್‌ಗೆ ಮತ್ತೆ “ಇ- ಕೆವೈಸಿ’ ನೋಂದಣಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಬಿಪಿಎಲ್‌ ಪಡಿತರ ಚೀಟಿಗೆ ಕಡಿವಾಣ ಹಾಕಲು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ “ಇ- ಕೆವೈಸಿ’ (ಎಲೆಕ್ಟ್ರಾನಿಕ್‌- ನೋ ಯುವರ್‌ ಕಸ್ಟಮರ್‌) ನೋಂದಣಿ ಪ್ರಕ್ರಿಯೆಗೆ ಬುಧ ವಾರದಿಂದ ಮರು ಚಾಲನೆ ಸಿಗಲಿದ್ದು, ಎರಡು ತಿಂಗ ಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ವಿಕಾಸಸೌಧದಲ್ಲಿ ಮಂಗಳವಾರ ಇಲಾಖೆಯ ನಿರ್ದೇಶಕರು, ಉಪನಿರ್ದೇಶಕರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ರೀತಿಯ ಸೌಕರ್ಯವಿದ್ದವರೂ ಬಿಪಿಎಲ್‌ ಪಡಿತರ ಚೀಟಿ ಪಡೆಯುವುದನ್ನು ನಿಯಂತ್ರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ಪಡಿತರ ಚೀಟಿಗಳನ್ನು ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಿ “ಇ- ಕೆವೈಸಿ’ ನೋಂದಣಿ ಪ್ರಕ್ರಿಯೆಯನ್ನು ಬುಧವಾರ ದಿಂದ ಮತ್ತೆ ಆರಂಭಿಸಲಾಗುವುದು.

ನ್ಯಾಯಬೆಲೆ ಅಂಗಡಿಗಳು ಮಂಗಳವಾರ ಹೊರತುಪಡಿಸಿ ಇತರೆ ರಜಾ ದಿನಗಳಲ್ಲಿಯೂ “ಇ- ಕೆವೈಸಿ’ ನೋಂದಣಿ ಕಾರ್ಯ ನಿರ್ವಹಿಸಿ 2 ತಿಂಗಳಲ್ಲಿ ಪೂರ್ಣಗೊಳಿಸು ವಂತೆ ಸೂಚನೆ ನೀಡಲಾಗಿದೆ ಎಂದರು. “ಇ-ಕೆವೈಸಿ’ ನೋಂದಣಿಯಿಂದ ಅಕ್ರಮ ಬಿಪಿ ಎಲ್‌ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಅನುಕೂಲಸ್ಥ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಗಳನ್ನು ಎರಡು ತಿಂಗಳಲ್ಲಿ ಹಿಂತಿರುಗಿಸಬೇಕು. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಜಾಹೀರಾತುಗಳ ಮೂಲಕವೂ ಮಾಹಿತಿ ನೀಡಲಾಗು ವುದು ಎಂದು ಹೇಳಿದರು.

62,922 ಕಾರ್ಡ್‌ ರದ್ದು: ಸರ್ಕಾರಿ ನೌಕರರು, ನಿವೃತ್ತ ನೌಕರರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಆರ್ಥಿಕವಾಗಿ ಅನುಕೂಲಸ್ಥ 62,922 ಕುಟುಂಬಗಳು ಪಡೆದಿದ್ದ ಪಡಿತರ ಚೀಟಿಯನ್ನು ರದ್ದು ಪಡಿಸಲಾಗಿದೆ. 43,000 ಬಿಪಿಎಲ್‌ ಕಾರ್ಡ್‌ ದಾರರು ಎಪಿಎಲ್‌ಗೆ ವರ್ಗಾವಣೆಯಾಗಿದ್ದಾರೆ. ಒಂದು ಲಕ್ಷಕ್ಕಿಂತ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳನ್ನು ಅಕ್ರಮವೆಂದು ಪರಿಗಣಿಸಿ ರದ್ದುಪಡಿಸಲಾಗಿದೆ. ಅನುಕೂಲಸ್ಥರಾಗಿದ್ದರೂ ಬಿಪಿಎಲ್‌ ಕಾರ್ಡ್‌ ಪಡೆ ದಿದ್ದ ಕುಟುಂಬಗಳಿಗೆ ಒಟ್ಟು 96 ಲಕ್ಷ ರೂ.ಗಿಂತ ಹೆಚ್ಚು ದಂಡ ವಿಧಿಸಲಾಗಿದೆ ಎಂದು ವಿವರ ನೀಡಿದರು.

ರಾಜ್ಯಾದ್ಯಂತ ಬಿಪಿಎಲ್‌ ಪಡಿತರ ಚೀಟಿಗಾಗಿ 2.17 ಲಕ್ಷ ಮಂದಿ ಹಾಗೂ ಎಪಿಎಲ್‌ ಪಡಿತರ ಚೀಟಿ ಗಾಗಿ 1.21 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎರಡು ತಿಂಗಳಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಹಿರಿಯ ನಾಗರಿಕ ಪಡಿತರದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ಪಡೆಯಲು ಸಾಧ್ಯವಾಗದ ಕಾರಣ ಅವರ ಬದಲಿಗೆ ನೆರೆಹೊರೆಯವರು ಪಡೆದುಕೊಳ್ಳಲು ಅವಕಾಶವಿದೆ.

ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಇತರರು ಪಡೆದು ಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ರಾಜ್ಯ ದಲ್ಲಿ 1.40 ಲಕ್ಷ ಹಿರಿಯ ನಾಗರಿಕ ಪಡಿತರದಾರರನ್ನು ಗುರುತಿಸಲಾಗಿದೆ ಎಂದರು. ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ರಾಜ್ಯದ ಯಾವುದೇ ಜಿಲ್ಲೆಯ ಲ್ಲಾದರೂ ಪಡಿತರ ಪಡೆದು ಕೊಳ್ಳುವ ವ್ಯವಸ್ಥೆ ಇದೆ. ಕೂಲಿ ಅರಸಿ ನಗರ ಪ್ರದೇಶ ಗಳಿಗೆ ವಲಸೆ ಹೋಗುವ ಗ್ರಾಮೀಣ ಜನರು ಸ್ವಗ್ರಾ ಮಕ್ಕೆ ತೆರಳಿ ಪಡಿತರ ಪಡೆದು ಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ವ್ಯವಸ್ಥೆ ಜಾರಿ ಗೊಳಿಸ ಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ದಾಸೋಹ ಯೋಜನೆಯಡಿ ಸರ್ಕಾರಿ, ಅನುದಾನಿತ, ಅನುದಾನೇತರ, ಎನ್‌ಜಿಒ ಹಾಗೂ ಖಾಸಗಿ ಸಂಸ್ಥೆಗಳನ್ನು ಒಳಗೊಂಡ ಅರ್ಹ 400ಕ್ಕೂ ಹೆಚ್ಚು ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ, ಗೋಧಿಯನ್ನು ಉಚಿತ ವಾಗಿ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಇದನ್ನು ಸೀಮಿತಗೊಳಿಸಿದ ಹಿನ್ನೆಲೆಯಲ್ಲಿ 351 ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ, ಗೋಧಿ ಹಂಚಿಕೆ ಮುಂದು ವರಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದಲೇ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಅನ್ಯ ರಾಜ್ಯದಲ್ಲೂ ಪಡಿತರ: ಕೇಂದ್ರ ಸರ್ಕಾರದ ಸೂಚನೆಯಂತೆ ಅಂತಾರಾಜ್ಯದಲ್ಲೂ ಪಡಿತರ ಪಡೆದು ಕೊಳ್ಳುವ ವ್ಯವಸ್ಥೆಯನ್ನು ಮುಂದಿನ ತಿಂಗಳು ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಕೇರಳದಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಹೇಳಿದರು.

“ಸಿಎಂ ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ’: ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಪ್ರಮಾಣ ಇಳಿಕೆ ಮಾಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಸ್ಪಷ್ಟ ಉತ್ತರ ನೀಡಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡು ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ. ಈ ಹಂತದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಜೆಟ್‌ ಮಂಡನೆ ಬಳಿಕ ಈ ಬಗ್ಗೆ ಗೊತ್ತಾಗಲಿದೆ ಎಂದು ಸಚಿವರು ಹೇಳಿದರು.

Comments are closed.