ರಾಷ್ಟ್ರೀಯ

ದಿಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿಕೆ; ಸೇನೆ ನಿಯೋಜನೆಗೆ ಕೇಜ್ರಿವಾಲ್ ಒತ್ತಾಯ; ಪೊಲೀಸರಿಗೆ ಹೈಕೋರ್ಟ್ ಛೀಮಾರಿ

Pinterest LinkedIn Tumblr

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ಸಿಎಎ ಪರ ಹೋರಾಟಗಾರರ ಮಧ್ಯೆ ಶುರುವಾದ ಸಂಘರ್ಷ ಈಗ ದಿಲ್ಲಿಯನ್ನು ಹೊತ್ತಿ ಉರಿಸುತ್ತಿದೆ. ಮೂರು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಗಳಲ್ಲಿ ಈವರೆಗೆ 20 ಮಂದಿ ಮೃತಪಟ್ಟಿದ್ಧಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇವತ್ತು ಆರೇಳು ಗಾಯಾಳುಗಳು ಅಸುನೀಗಿರುವುದು ವರದಿಯಾಗಿದೆ. ಪರಿಸ್ಥಿತಿ ಬಹುತೇಕ ಕೈಮೀರಿ ಹೋಗುವಂತಿದೆ. ಪತ್ರಕರ್ತರ ಮೇಲೂ ಹಲ್ಲೆ ನಡೆಯುವುದು ಮುಂದುವರಿದಿದೆ.

ದಿಲ್ಲಿ ಹೊತ್ತಿ ಉರಿಯುತ್ತಿದ್ದರೂ ನಿಷ್ಕ್ರಿಯವಾಗಿದ್ಧಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಇವತ್ತು ಮೌನ ಮುರಿದಿದ್ದಾರೆ. ದಿಲ್ಲಿ ಹಿಂಸಾಚಾರ ನಿಗ್ರಹಿಸಲು ಪೊಲೀಸರಿಗೆ ಅಸಾಧ್ಯವಾಗಿರುವುದರಿಂದ ಸೇನೆಯನ್ನು ಕರೆಸಬೇಕು. ಹಿಂಸೆ ನಡೆಯುತ್ತಿರುವ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಬೇಕು ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ಧಾರೆ.

ನಿನ್ನೆ ರಾತ್ರಿ ಪೌರತ್ವ ವಿರೋಧಿ ಪ್ರತಿಭಟನಾಕಾರರು ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸಕ್ಕೆ ಘೇರಾವ್ ಮಾಡಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಜಾಮಿಯಾ ಕೋಆರ್ಡಿನೇಶನ್ ಕಮಿಟಿ ಎರಡೂ ಜಂಟಿಯಾಗಿ ಈ ಪ್ರತಿಭಟನೆ ನಡೆಸಿದ್ದವು. ಹಿಂಸಾಚಾರ ನಡೆಸುವವರ ವಿರುದ್ಧ ಕೇಜ್ರಿವಾಲ್ ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ನೂರಾರು ಜನರು ಕೇಜ್ರಿವಾಲ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ಪೊಲೀಸರು ನೀರಿನ ಗನ್ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು.

ಇನ್ನು, ಇವತ್ತು ದಿಲ್ಲಿಯಲ್ಲಿ ಪ್ರತಿಭಟನೆ ನಿಲ್ಲದೇ ಇನ್ನಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತು ಸಭೆಗಳನ್ನು ಕರೆದು ಪರಿಸ್ಥಿತಿ ಅವಲೋಕಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಹಿಂಸೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಗಮನಿಸುತ್ತಿದ್ದಾರೆ. ನೂತನವಾಗಿ ಅಧಿಕಾರ ಸ್ವೀಕರಿಸಿದ ನವದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಕೂಡ ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಇದೇ ವೇಳೆ, ದೆಹಲಿ ಹೈಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿದೆ. ಶಾಹೀನ್ ಬಾಗ್ ಪ್ರಕರಣದ ವಿಚಾರಣೆ ನಡೆಸುವ ವೇಳೆ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ನ್ಯಾಯಾಲಯ ಕೋಪ ವ್ಯಕ್ತಪಡಿಸಿದೆ. ಪೊಲೀಸರಲ್ಲಿ ವೃತ್ತಿಪರತೆ ಇಲ್ಲ. ಅವರಿಗೆ ಕರ್ತವ್ಯ ನಿಭಾಯಿಸಲು ಸರಿಯಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಕಾನೂನು ಬದ್ಧವಾಗಿ ಪೊಲೀಸರು ಕೆಲಸ ಮಾಡಿದರೆ ಇಂಥ ಬಹುತೇಕ ಸಮಸ್ಯೆಗಳು ತಲೆದೋರುವುದೇ ಇಲ್ಲ ಎಂದು ದೆಹಲಿ ಉಚ್ಚ ನ್ಯಾಯಪೀಠ ಅಭಿಪ್ರಾಯಪಟ್ಟಿತು.ಇತ್ತ, ವಿವಿಧ ರಾಜಕೀಯ ಪಕ್ಷಗಳು ಪರಿಸ್ಥಿತಿ ಅವಲೋಕಿಸುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಎಕೆ ಆಂಥೋನಿ, ಗುಲಾಂ ನಬಿ ಆಜಾದ್, ಪಿ ಚಿದಂಬರಮ್, ಪ್ರಿಯಾಂಕಾ ಗಾಂಧಿ ಮೊದಲಾದವರು ಸಭೆ ನಡೆಸಿ ಚರ್ಚೆ ಮಾಡಿದ್ಧಾರೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದರಿಂದ ಈ ಸಭೆಯಲ್ಲಿ ಪಾಲ್ಗೊಂಡಿಲ್ಲ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೇರಿ ಆಡಳಿತ ನಡೆಸುತ್ತಿರುವ ಶಿವಸೇನಾ ಪಕ್ಷ ದೆಹಲಿಯ ಹಿಂಸಾಚಾರ ಘಟನೆಯನ್ನು 1984ರ ಸಿಖ್ ವಿರೋಧಿ ದಂಗೆಗೆ ಹೋಲಿಕೆ ಮಾಡಿದೆ.

Comments are closed.