
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಸಚಿವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸದಾ ತನ್ನ ನಾಲಿಗೆಯನ್ನು ಹರಿಬಿಟ್ಟು ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ಮಂತ್ರಿ ಫವಾದ್ ಚೌಧರಿ, ಭಾರತೀಯರು ಮೋದಿಯನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಜ್ರಿವಾಲ್, ಮೋದಿ ಪರ ಬ್ಯಾಟ್ ಮಾಡಿ ಭಯೋತ್ಪಾದನೆಗೆ ನೆರವು ನೀಡುವ ದೇಶ ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಜನರು ಮೋದಿಯನ್ನು ಸೋಲಿಸಬೇಕು. ಫೆಬ್ರವರಿ 8 ರಂದು ನಡೆಯುವ ದೆಹಲಿ ಚುನಾವಣೆಯಲ್ಲಿ ಸೋಲುವ ಭಯದಿಂದ ಮೋದಿ ದೇಶಕ್ಕೆ ಅಪಾಯವನ್ನು ಉಂಟು ಮಾಡುವ ಹಕ್ಕು ಮತ್ತು ಬೆದರಿಕೆಯನ್ನು ಹಾಕುತ್ತಿದ್ದಾರೆ. ಕಾಶ್ಮೀರ, ಪೌರತ್ವ ಕಾನೂನುಗಳು ಮತ್ತು ಆರ್ಥಿಕ ಹಿಂಜರಿತದ ವಿರುದ್ಧ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆಗಳಿಂದ ಮೋದಿ ಅವರು ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ರೀಟ್ವೀಟ್ ಮಾಡುವ ಮೂಲಕ ಚೌಧರಿಗೆ ಟಾಂಗ್ ನೀಡಿರುವ ಕೇಜ್ರಿವಾಲ್, ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಮತ್ತು ನನಗೂ ಅವರು ಪ್ರಧಾನ ಮಂತ್ರಿ. ದೆಹಲಿಯ ಚುನಾವಣೆ ಭಾರತದ ಆಂತರಿಕ ವಿಚಾರ. ಹಾಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನ ಮಾಡಿದರೂ ಭಾರತ ದೇಶದ ಏಕತೆಯನ್ನು ಹಾಳು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ದೆಹಲಿಯ ವಿಧಾನಸಭೆ ಚುನಾವಣೆ ಫೆಬ್ರವರಿ 8 ರಂದು ನಡೆಯಲಿದ್ದು, ಸದ್ಯ ಆಡಳಿತ ಪಕ್ಷವಾದ ಆಮ್ ಆದ್ಮಿ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತೀವೆ.
Comments are closed.