ಕರಾವಳಿ

ಹರಿಪಾದ ಸೇರಿದ ಮಹಾಸಂತ ಪೇಜಾವರ ಶ್ರೀ: ಸಿಎಂ ಭೇಟಿ, ಸಾವಿರಾರು ಭಕ್ತರಿಂದ ಅಂತಿಮ ದರ್ಶನ- ಗೋವಿಂದ ನಾಮ ಪಾರಾಯಣ

Pinterest LinkedIn Tumblr

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ ಸ್ವಾಮೀಜಿಗಳಾದ ಮಹಾಸಂತ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತೀವ್ರ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ಹರಿಪಾದವನ್ನು ಸೇರಿದರು.

ಉಡುಪಿಯ ಅಷ್ಟಮಠಗಳ ಯತಿ ಪರಂಪರೆಯಲ್ಲಿ ಅತೀ ಹಿರಿಯ ಯತಿಯಾಗಿದ್ದ ವಿಶ್ವೇಶ ತೀರ್ಥರಿಗೆ 89 ವರ್ಷ ವಯಸ್ಸಾಗಿತ್ತು. ಶ್ರೀಗಳ ಅಗಲುವಿಕೆಯಿಂದಾಗಿ ಸುದೀರ್ಘ ಇತಿಹಾಸವನ್ನು ಹೊಂದಿರುವ ಉಡುಪಿ ಅಷ್ಟಮಠಗಳ ಯತಿಪರಂಪರೆಯಲ್ಲಿನ ಮಹಾನ್ ಕೊಂಡಿಯೊಂದು ಕಳಚಿದಂತಾಗಿದೆ.

ನ್ಯುಮೇನಿಯ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು.

8 ದಿನ ನಡೆದಿದ್ದ ಜೀವನ್ಮರಣ ಹೋರಾಟ…
ಶನಿವಾರ ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಪೇಜಾವರ ಕಿರಿಯ ಶ್ರೀಗಳ ಆರೋಗ್ಯ ಸುಧಾರಣೆ ಕಂಡಿಲ್ಲ. ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ನಿನ್ನೆ ತಿಳಿಸಿದ್ದರು. ಅದರಂತೆ ಭಾನುವರ ಬೆಳಗ್ಗೆ ‌6:55 ಗಂಟೆಗೆ ತಜ್ಞ ವೈದ್ಯಕೀಯ ತಂಡ, ಬಿಗು ಪೊಲೀಸ್ ಭದ್ರತೆಯಲ್ಲಿ ಶ್ರೀಗಳನ್ನು ಮಣಿಪಾಲದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆದೊಯ್ಯಲಾಯಿತು. ಮಠಕ್ಕೆ ಕರೆದೊಯ್ದು ಕೆಲವೇ ಸಂದರ್ಭದಲ್ಲಿ ಶ್ರೀಗಳು ಕೊನೆಯುಸಿರೆಳೆದರು. 9.25ರ ಸುಮಾರಿಗೆ ಶ್ರೀಗಳ ನಿಧನ ಸುದ್ದಿ ಘೋಷಿಸಲಾಯಿತು.

ಸಾವಿರಾರು ಭಕ್ತರಿಂದ ಅಂತಿಮ ದರ್ಶನ:
ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆಯನ್ನು ಬೆಳಿಗ್ಗೆ 11.30 ಗಂಟೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅನಂತರ ಅಲ್ಲಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಅಲ್ಲಿ ಸಂಜೆ 4 ಗಂಟೆಗೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ತದನಂತರ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ವಿಧಿವಿಧಾನ ಕಾರ್ಯ ನಡೆಯಲಿದೆ. ಕೇಂದ್ರದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಭಕ್ತರಿಂದ ಗೋವಿಂದ ನಾಮ‌ ಪಾರಾಯಣ….
ಪೇಜಾವರ ಶ್ರೀ ಗಳ ಮಠದಲ್ಲಿ ಪೂಜೆ ಮೊದಲಾದ ಧಾರ್ಮಿಕ ಕ್ರಿಯೆ ನಡೆಸಿದ ಬಳಿಕ ಶ್ರೀಗಳನ್ನು ಮೆರವಣಿಗೆ ಮೂಲಕ ಪಲ್ಲಕ್ಕಿಯಲ್ಲಿರಿಸಿ ಕನಕ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನ, ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಬಳಿಕ ಅವರ ಕೈಯಲ್ಲಿ ಕೃಷ್ಣ ಪೂಜೆ ಮಾಡಿಸಿ ಬಳಿಕ ಉಡುಪಿ ಅಜ್ಜಿ ಕಾಡಿಗೆ ಅಂತಿಮ ದರ್ಶನಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಭಕ್ತರು ಗೋವಿಂದ ನಾಮಾವಳಿ ಪಾರಾಯಣ ಮಾಡಿದರು.

ಸಿಎಂ ಸಹಿತ ಗಣ್ಯರಿಂದ ಅಂತಿಮ ದರ್ಶನ..
ಪೇಜಾವರ ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್,ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.

ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ 700 ಕ್ಕೂ ಅಧಿಕ ಪೊಲೀಸರ ನಿಯೋಜನೆಯಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.