ಕರ್ನಾಟಕ

ಯಡಿಯೂರಪ್ಪ ನಿಜವಾದ ಹೋರಾಟಗಾರರಾಗಿದ್ದರೆ ಪರಿಹಾರ ನೀಡಲಿ; ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್​ ಮಾಡುವ ಮೂಲಕ ಹರಿಹಾಯ್ದಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್​ಗೆ ಬಲಿಯಾದವರು ಗಲಭೆಕೋರರು, ಅಪರಾಧ ಮಾಡಿದವರಿಗೆ ಪರಿಹಾರ ನೀಡಲಾಗುವುದಿಲ್ಲ ಎಂದು ಸಿಎಂ ಬಿಎಸ್​ವೈ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್​ಡಿಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್ವೈ ಆಡಳಿತದಲ್ಲಿ ಜನರಿಗೆ, ಹೋರಾಟಗಾರರಿಗೆ ರಕ್ಷಣೆ ಇಲ್ಲ. ಎಷ್ಟೇ ಆದರೂ ಇದು ಅನರ್ಹ ಸರ್ಕಾರವಲ್ಲವೇ? ಎಂದು ಎಚ್​ಡಿಕೆ ಪ್ರಶ್ನಾರ್ಥವಾಗಿ ವ್ಯಂಗ್ಯವಾಡಿದ್ದಾರೆ. ಮುಂದುವರೆದು, ನಾಲ್ಕು ದಿನ ಕಳೆದ ನಂತರ ಗೋಲಿಬಾರಿಗೆ ಬಲಿಯಾದವರಿಬ್ಬರೂ ಗಲಭೆಕೋರರು ಎಂದು ಬಿಂಬಿಸಿರುವ ಉದ್ದೇಶವಾದರೂ ಏನು? ಇದನ್ನು ನೀವು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಜನತೆಗೆ ಉತ್ತರ ನೀಡಬೇಕಾಗುತ್ತದೆ. ಅಮಾಯಕರ ಮೇಲೆ ನಿಮ್ಮ ನೀಚ ಕೆಲಸದ ತಪ್ಪನ್ನು ಹೊರಿಸಿದರೆ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತಕ್ಕೆ ತಯಾರಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಯಡಿಯೂರಪ್ಪನವರು ಮಂಗಳೂರಿಗೆ ಭೇಟಿ ನೀಡಿದಂದೇ ಗೋಲಿಬಾರಿಗೆ ಬಲಿಯಾದವರು ಗಲಭೆಯಲ್ಲಿ ಭಾಗಿಯಾದವರು ಎಂದು ಪೊಲೀಸರು ಯಡಿಯೂರಪ್ಪನವರಿಗೆ ಮಾಹಿತಿ ನೀಡಿರಲಿಲ್ಲವೇ? ಅಂದು ಯಡಿಯೂರಪ್ಪನವರಿಗೆ ಆ ಎಡಿಟೆಡ್ ವೀಡಿಯೋ ತೋರಿಸಿರಲಿಲ್ಲವೇ? ಅಭಿಪ್ರಾಯ ಬೇಧವನ್ನು ಬಿಜೆಪಿ ಸಹಿಸುವುದಿಲ್ಲ. ಹೋರಾಟಗಳನ್ನು, ಹೋರಾಟಗಾರರನ್ನು ‘so called ಹೋರಾಟಗಾರ’ ಯಡಿಯೂರಪ್ಪ ಸಹಿಸುವುದಿಲ್ಲ. ಬಿಎಸ್​ವೈ ನಿಜವಾಗಿಯೂ ಹೋರಾಟಗಾರರಾಗಿದ್ದರೆ ಪರಿಹಾರ ಮಂಜೂರು ಮಾಡಲಿ. ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಲಿ ಎಂದು ಸವಾಲು ಹಾಕಿದ್ದಾರೆ.

ಸತ್ತವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ಪರಿಹಾರ ವಂಚನೆಗೆ ಬಿಎಸ್ವೈ ನೀಡಿರುವ ಸಬೂಬು ಎಂಥ ಕ್ಷುಲ್ಲಕ? ಹೋರಾಟ ಅಪರಾಧವೇ? ಹೋರಾಟ ಸಂವಿಧಾನ ಬದ್ಧ ಹಕ್ಕು. ಹೋರಾಟಗಳನ್ನು ಹತ್ತಿಕ್ಕುವವರು ಸಂವಿಧಾನ ವಿರೋಧಿಗಳು. ದೇಶಭ್ರಷ್ಟರು. ಮಂಗಳೂರಿನಲ್ಲಿ ಆ’ರಕ್ಷಕ’ರಿಂದಲೇ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದ್ದೂ ಅಲ್ಲದೇ ಪರಿಹಾರವನ್ನೂ ವಂಚಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ ಈಗ ಇಲ್ಲ ಎನ್ನುತ್ತಿರುವ ಬಿಎಸ್ವೈ ವಚನ ಭ್ರಷ್ಟ, ಸುಳ್ಳುಗಾರ ಎಂದು ಎಚ್​ಡಿಕೆ ಹರಿಹಾಯ್ದಿದ್ದಾರೆ.

Comments are closed.