
ಶಿವಮೊಗ್ಗ: ಹಿರಿಯರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹಣ, ಒಡವೆ, ಮನೆ ನಿವೇಶನ ಹೀಗೆ ವಿವಿಧ ರೀತಿಯಲ್ಲಿ ಆಸ್ತಿ ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ದಂಪತಿ ತಮ್ಮ ಮೊಮ್ಮಗಳಿಗೆ “ಕಾಡು’ ಬೆಳೆಸಿ ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ.
ಮುಂದಿನ ಪೀಳಿಗೆಯಲ್ಲ, ಈ ಪೀಳಿಗೆಯ ಮಕ್ಕಳಿಗೇ ಎಷ್ಟೋ ಮರಗಳ ಹೆಸರು ಗೊತ್ತಿಲ್ಲ. ನೋಡಿಯೂ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಶಿವಮೊಗ್ಗದ ಈ ದಂಪತಿ ಒಂದು ಎಕರೆ ಭೂಮಿ ಖರೀದಿ ಮಾಡಿ ಅದರಲ್ಲಿ ಅಪರೂಪದ ಗಿಡಗಳನ್ನು ನೆಟ್ಟು ಅದನ್ನು ತಮ್ಮ ಮೊಮ್ಮಗಳಿಗೆ ಕೊಡಲು ಸಿದ್ಧತೆ ನಡೆಸಿದ್ದಾರೆ. ಈ “ಆರ್ವಿ’ ವನ ಈಗ ಸುತ್ತಮುತ್ತಲ ಜನರ ಮನ ಸೆಳೆಯುತ್ತಿದೆ.
ಎಂಪಿಎಂ ಕಾರ್ಖಾನೆ ನಿವೃತ್ತ ಅಧಿಕಾರಿ, ಶಿವಮೊಗ್ಗ ನಿವಾಸಿ ಮಹಾದೇವಸ್ವಾಮಿ ದಶಕಗಳಿಂದಲೂ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವುದು ಅವರ ಪರಿಸರ ಕಾಳಜಿಗೆ ಸಾಕ್ಷಿ. ಪತ್ನಿ ಮಂಜುಳಾದೇವಿ ಕೂಡ ಪತಿಗೆ ಬೆನ್ನೆಲುಬಾಗಿದ್ದಾರೆ. ಈ ದಂಪತಿಯ ಮಗಳ ವಿವಾಹವಾಗಿದ್ದು, ಸದ್ಯ ಆಸ್ಟ್ರೇಲಿಯದಲ್ಲಿ ವಾಸವಾಗಿದ್ದಾರೆ. ತಮ್ಮ ಮೊಮ್ಮಗಳ ಪ್ರಾಣಿ-ಪಕ್ಷಿ ಮೇಲಿನ ಪ್ರೇಮ ಹಾಗೂ ಪರಿಸರ ಕಾಳಜಿಯಿಂದ ಬೆರಗುಗೊಂಡ ಅಜ್ಜಿ, ತಾತ ಮೊಮ್ಮಗಳು ಆರ್ವಿಗೆ ಏನಾದರೂ ವಿಶೇಷ ಉಡುಗೊರೆ ನೀಡಲು ನಿರ್ಧರಿಸಿ ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಬಳಿ 1.28 ಎಕರೆ ಜಮೀನನ್ನು 40 ಲಕ್ಷ ರೂ. ನೀಡಿ ಖರೀದಿಸಿ ಆರು ತಿಂಗಳುಗಳಿಂದ ವನ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಪಶ್ಚಿಮ ಘಟ್ಟದ ಮರಗಿಡಗಳು
1 ಎಕರೆ ಪ್ರದೇಶದಲ್ಲಿ ತಮ್ಮ ಮೊಮ್ಮಗಳ ಬರ್ತ್ಡೆ ಸಂದರ್ಭದಲ್ಲಿ ಇವರು ಸುಮಾರು 400 ಗಿಡಗಳನ್ನು ನೆಟ್ಟಿದ್ದು, ಅವು ಈಗಾಗಲೇ ನಾಲ್ಕೈದು ಅಡಿ ಬೆಳೆದಿವೆ. ಬೇವು, ಹೊನ್ನೆ, ಸಂಪಿಗೆ, ತಾರೆ, ಶಿವನಿ, ನಾಗಲಿಂಗಪುಷ್ಪ, ಅತ್ತಿ, ಹಿಪ್ಪೆ, ಚಳ್ಳೆ, ಹೊಳೆ ಮತ್ತಿ, ರಕ್ತಚಂದನ ಹೀಗೆ 43 ಕಾಡು ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ. ಅದೇ ರೀತಿ ಮಾವು, ಹಲಸು, ಕಿತ್ತಳೆ, ರಾಮಫಲ, ನುಗ್ಗೆ, ಬಾಳೆ, ಪಪ್ಪಾಯಿ ಸೇರಿ 30 ಜಾತಿಯ ತೋಟಗಾರಿಕೆ ಗಿಡಗಳು ಸಹ ಇವೆ. ಈ ಮರದ ಹಣ್ಣುಗಳು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಲಿ ಎಂಬುದು ಅವರ ಕಾಳಜಿ. ಮರಗಳು ಹೆಚ್ಚಾದಂತೆ ಅಂತರ್ಜಲ ಹೆಚ್ಚಾಗುತ್ತದೆ. ಈ ಭಾಗದಲ್ಲಿ ಒಂದೂವರೆ ಇಂಚು ನೀರು ಸಿಕ್ಕಿರುವುದೇ ನಮ್ಮ ಅದೃಷ್ಟ ಎನ್ನುತ್ತಾರೆ ಮಹಾದೇವಸ್ವಾಮಿ.
ಪ್ರಾಣಿ, ಪಕ್ಷಿ ಕಂಡರೆ ಮೊಮ್ಮಗಳಿಗೆ ತುಂಬಾ ಖುಷಿ. ಎಲ್ಲರೂ ಹಣ, ಒಡವೆ, ಆಸ್ತಿ ಕೊಡುತ್ತಾರೆ. ನಾನು ಅವಳಿಗೆ ವನ ಕೊಡುತ್ತಿದ್ದೇನೆ. ರಿಯಲ್ ಎಸ್ಟೇಟ್ನವರು ಈ ಭೂಮಿ ಕೇಳಿದರೂ ಅವರಿಗೆ ಪರಿಸರ ಸಂರಕ್ಷಣೆಯ ಸದುದ್ದೇಶ ಅರ್ಥ ಮಾಡಿಸಿದ್ದೇನೆ. ಈ ವನವನ್ನು ಮೊಮ್ಮಗಳ ಹೆಸರಿಗೆ ವಿಲ್ ಮಾಡುವೆ.
Comments are closed.