
ಬೆಂಗಳೂರು(ಡಿ. 21): ಮಂಗಳೂರಿನ ಗಲಭೆಯಲ್ಲಿ ಲಾಠಿ ಚಾರ್ಚ್ ವೇಳೆ ಇಬ್ಬರು ಸಾವನ್ನಪ್ಪಿದ ಬಗ್ಗೆ ಪ್ರತಿಕ್ರಿಯಿಸುತ್ತಾ ಸಮಯ ಸಂದರ್ಭ ನೋಡಿ ಪೊಲೀಸರು ಲಾಠಿ ಚಾರ್ಜ್ ಮಾಡಬಹುದು ಎಂದು ಗೃಹ ಸಚಿವ ಬಸವರಾಜ್ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ. ಎಲ್ಲವನ್ನೂ ಪೊಲೀಸರೇ ನಿರ್ಧರಿಸುವುದಾದರೆ ಗೃಹ ಸಚಿವರಿಗೆ ಏನು ಕೆಲಸ ಎಂದು ಪ್ರಶ್ನಿಸಿರುವ ಅವರು, ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರನ್ನು ಕೊಲ್ಲುವ ಉದ್ದೇಶದಿಂದ ಸರ್ಕಾರ ಗುಂಡಿನ ದಾಳಿ ನಡೆಸಿದೆ. ಸರ್ಕಾರ ಆದೇಶಿಸದಯೇ ಪೊಲೀಸರು ಈ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ನಿನ್ನೆ ಹರಿಹಾಯ್ದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಮಯ ಸಂದರ್ಭ ನೋಡಿ ಪೊಲೀಸರೇ ಲಾಠಿ ಚಾರ್ಜ್, ಗೋಲಿಬಾರ್ ಮಾಡಬಹುದು ಎಂದು ಸಮಜಾಯಿಷಿ ನೀಡಿದ್ದರು.
“ಎಲ್ಲವನ್ನೂ ಪೊಲೀಸರೇ ತೀರ್ಮಾನ ಮಾಡುವುದಾದರೆ ಗೃಹ ಸಚಿವರಾಗಿ ನೀಮಗೇನು ಕೆಲಸ? ಇನ್ನೂ ಯಾಕೆ ಆ ಹುದ್ದೆಯಲ್ಲಿದ್ದೀರ, ಎಲ್ಲವನ್ನೂ ಅವರಿಗೇ ನಿರ್ಧರಿಸಲು ಬಿಟ್ಟು ರಾಜೀನಾಮೆ ನೀಡಿ ಮನೆಗೆ ಹೋಗಿ” ಎಂದು ಟ್ವೀಟ್ ಮಾಡಿ ಗೃಹ ಸಚಿವರ ವಿರುದ್ದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆಯಾಗಿ, ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯ, ಗೋಲಿಬಾರ್ನಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರೊಬ್ಬರು ‘ರಿವಾಲ್ವರ್ಗಳಿರುವುದು ಪೂಜೆ ಮಾಡೋಕೆ ಅಲ್ಲ’ ಎಂದು ಹೇಳುತ್ತಾರೆ. ಇಂಥ ಮಾತುಗಳು ಗಲಭೆಗೆ ಪ್ರಚೋದನೆ ನೀಡದಂತೆ ಆಗುವುದಿಲ್ಲವೇ? ರಿವಾಲ್ವರ್ ಇದೆ ಅಂತ ದಿನಕ್ಕೊಬ್ಬನನ್ನು ಕೊಲ್ಲುತ್ತೀರ? ಬಿಜೆಪಿಯ ನಾಯಕರೇ ನಾಚಿಕೆಯಾಗಲ್ವ ನಿಮಗೆ ಇಂಥವರನ್ನು ಇನ್ನೂ ಮಂತ್ರಿಯಾಗಿ ಉಳಿಸಿಕೊಂಡಿದ್ದೀರಲ್ಲ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ವಿರುದ್ದ ಕಿಡಿಕಾರಿದ್ದಾರೆ.
ನೊಂದವರ ಧ್ವನಿಯಾಗಿ, ಸರ್ಕಾರದ ಅನ್ಯಾಯವನ್ನು ಎತ್ತಿ ತೋರಿಸಲು ಅವಕಾಶವಿಲ್ಲ ಎಂದಾದರೆ ವಿರೋಧ ಪಕ್ಷ ಏಕೆ ಬೇಕು? ಕಾನೂನು ಸುವ್ಯವಸ್ಥೆ ಬಗ್ಗೆ ಎರಡೆರಡು ಬಾರಿ ಗೋಲಿಬಾರ್ ಮಾಡಿಸಿ ಅಮಾಯಕರನ್ನು ಕೊಂದ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯ ನನಗಿಲ್ಲ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಲಿಬಾರ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಬಿಎಸ್ ವೈ
ನೆನ್ನೆ ಘಟನೆ ನಡೆಯಬಾರದಿತ್ತು. ಆದರೆ, ಅನಿವಾರ್ಯ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಫೈರಿಂಗ್ ಆರ್ಎಂಸಿ ಕಟ್ಟಡದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಅಲ್ಲಿಗೆ ನುಗ್ಗಿದ ಕೆಲವರು ಕಟ್ಟಡದ ಗೋಡೆ ಒಡೆಯಲು ಯತ್ನಿಸಿದ್ದರು. ಪರಿಸ್ಥಿತಿ ಕೈಮೀರಿದ್ದರೆ, ಅವರ ಕೈಗೆ ಬಂದೂಕುಗಳು ಸಿಗುತ್ತಿದ್ದವು. ಒಂದು ವೇಳೆ ಹಾಗೆ ಬಂದೂಕು ಅವರ ಕೈಗೆ ಸಿಕ್ಕಿದ್ದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತಿತ್ತು ಎಂಬುದನ್ನು ನೀವೇ ಯೋಚಿಸಿ. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಗೋಲಿಬಾರ್ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ಧಾರೆ.
ಗೃಹ ಸಚಿವ ವಿರುದ್ಧ ಸಿದ್ದರಾಮಯ್ಯ ಮಾಡಿದ ಟೀಕೆಗೂ ಬಿಎಸ್ವೈ ತಿರುಗೇಟು ನೀಡಿದ್ದಾರೆ. “ಸಿದ್ದರಾಮಯ್ಯ ಹೇಳಿಕೆ ನಿಜಕ್ಕೂ ಆಶ್ಚರ್ಯ ತಂದಿದೆ. ಹಿಂದೆ ಅವರು ಸಿಎಂ ಆಗಿದ್ದಂತಹವರು. ಅವರು ಈ ರೀತಿಯ ಲಘು ಹೇಳಿಕೆ ನೀಡುವುದು ಸೂಕ್ತವಲ್ಲ. ಫೈರಿಂಗ್ ಮಾಡುವ ಉದ್ದೇಶ ನಮಗೂ ಇಲ್ಲ, ಅಧಿಕಾರಿಗಳಿಗೂ ಇಲ್ಲ. ಆದರೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗಟ್ಡ ಸಂದರ್ಭದಲ್ಲಿ, ಫೈರಿಂಗ್ ಅನಿವಾರ್ಯ. ಪರಿಸ್ಥಿತಿ ನಿಯಂತ್ರಣಕ್ಕೆ ಈ ಕೆಲಸ ಮಾಡಲೇಬೇಕಾಗುತ್ತದೆ” ಎಂದಿದ್ದಾರೆ,
Comments are closed.