ಕರ್ನಾಟಕ

ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆ ಅಂಗೀಕರಿಸದ ಹೈಕಮಾಂಡ್; ಸಿದ್ದರಾಮಯ್ಯ ಬಗ್ಗೆ ಹೇಳಿದ್ದೇನು…?

Pinterest LinkedIn Tumblr

ನವ ದೆಹಲಿ: ಕರ್ನಾಟಕ ಉಪ ಚುನಾವಣೆಯ ಸೋಲಿನ ಹೊಣೆಹೊತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ರಾಜೀನಾಮೆಯನ್ನು ನಿರಾಕರಿಸಿದೆ ಎಂದು ಇದೀಗ ತಿಳಿದುಬಂದಿದೆ.

ರಾಜ್ಯ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ಸೋಲು ಕಾಂಗ್ರೆಸ್ ಪಾಳಯವನ್ನು ಸತತ ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಎಲ್ಲಾ ಚುನಾವಣೆಯನ್ನೂ ರಾಜ್ಯ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಎದುರಿಸಿ ಸೋಲನುಭವಿಸಿದ್ದು ಉಲ್ಲೇಖಾರ್ಹ. ಇದು ಸಿದ್ದರಾಮಯ್ಯ ವಿರುದ್ಧ ಪಕ್ಷದ ಒಳಗೆ ಟೀಕೆಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಉಪ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ, ಎರಡು ದಿನದ ಬಳಿದ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ರಾಜೀನಾಮೆಯನ್ನು ಪಕ್ಷ ಅಂಗೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್ “ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ನಿಮ್ಮ ಅಗತ್ಯವಿದ್ದು, ವಿಪಕ್ಷ ನಾಯಕನ ಸ್ಥಾನದಲ್ಲೇ ಮುಂದುವರೆಯುವಂತೆ ಒತ್ತಡ ಹೇರಿದ್ದಾರೆ” ಎಂದು ತಿಳಿದುಬಂದಿದೆ.

ಆದರೆ, ಸಿದ್ದರಾಮಯ್ಯ ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದು ಅವರ ಮುಂದಿನ ನಡೆ ಏನು? ಎಂಬ ಕುರಿತು ರಾಜ್ಯ ರಾಜಕೀಯದಲ್ಲಿ ಇದೀಗ ಸಾಕಷ್ಟು ಕುತೂಹಲ ಮೂಡಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯ ಕುರಿತು ಕಾಂಗ್ರೆಸ್​ ಹೈಕಮಾಂಡ್​ನಿಂದ ಈವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

Comments are closed.