ರಾಷ್ಟ್ರೀಯ

ಹೈದರಾಬಾದ್ ಎನ್ಕೌಂಟರ್ ನಡುವೆ ವಾರಂಗಲ್ ಎನ್ಕೌಂಟರ್ ವೈರಲ್

Pinterest LinkedIn Tumblr


ಅದು 2008 ಡಿಸೆಂಬರ್ 13. ವಾರಂಗಲ್ ಜಿಲ್ಲೆಯ ಕಾಕತೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಸ್ವಪ್ನಿಕ ಮತ್ತು ಪ್ರಣೀತ ಎಂದಿನಂತೆ ಕಾಲೇಜು ಮುಗಿಸಿ ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಈ ವೇಳೆ ಅದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಎಸ್. ಶ್ರೀನಿವಾಸ ರಾವ್ (25 ವರ್ಷ), ಪಿ. ಹರಿಕೃಷ್ಣ (24 ವರ್ಷ) ಹಾಗೂ ಬಿ. ಸಂಜಯ್ (22 ವರ್ಷ) ಬಸ್ ನಿಲ್ದಾಣಕ್ಕೆ ಆಗಮಿಸಿ ಯುವತಿಯರ ಜೊತೆಗೆ ಗಲಾಟೆ ಮಾಡಿದ್ದರು. ಅಲ್ಲದೆ, ತಾವು ತಂದಿದ್ದ ಆಸಿಡ್ ಅನ್ನು ಇಬ್ಬರೂ ಯುವತಿಯರ ಮುಖಕ್ಕೆ ಎರಚಿ ಪರಾರಿಯಾಗಿದ್ದರು.

ಆಸಿಡ್ ದಾಳಿಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವತಿ ಸ್ವಪ್ನಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಮೃತಪಟ್ಟಿದ್ದಳು. ತನಿಖೆಯ ವೇಳೆ ಬಾಯ್ಬಿಟ್ಟಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ರಾವ್ ಸ್ವಪ್ನಿಕ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣಕ್ಕೆ ಆಸಿಡ್ ದಾಳಿ ನಡೆಸಿದ್ದಾಗಿ ತಿಳಿಸಿದ್ದ. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆಂಧ್ರಪ್ರದೇಶದ ಜನ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆರೋಪಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುವಂತೆ ಆಗ್ರಹಿಸಿದ್ದರು. ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಗೆ ಈ ಪ್ರಕರಣ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.

ಕೊನೆಗೆ ಆಸಿಡ್ ದಾಳಿ ನಡೆದು ಒಂದು ವಾರದ ತರುವಾಯ ಸ್ಥಳ ಮಹಜರ್ ಹೆಸರಲ್ಲಿ ದಾಳಿ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದ ಪೊಲೀಸರು ಆತ್ಮರಕ್ಷಣೆಯ ಹೆಸರಲ್ಲಿ ಮೂವರು ಆರೋಪಿಗಳನ್ನು ಹೊಡೆದುರುಳಿಸಿದ್ದರು. ಯುವತಿಯರ ಮೇಲೆ ಆಸಿಡ್ ದಾಳಿ ನಡೆಸಿದ್ದ ಪಾತಕಿಗಳ ಎನ್ಕೌಂಟರ್​ಗೆ ಇಡೀ ರಾಜ್ಯ ಮತ್ತು ದೇಶ ಮೆಚ್ಚುಗೆ ಸೂಚಿಸಿತ್ತು. ಆತ್ಮರಕ್ಷಣೆ ಹೆಸರಿನಲ್ಲಿ ನಾಟಕವಾಡಿರುವ ಪೊಲೀಸರು ಯುವಕರನ್ನು ಉದ್ದೇಶಪೂರ್ವಕವಾಗಿ ಎನ್​ಕೌಂಟರ್ ಮಾಡಿದ್ದಾರೆ ಎಂದು ಮಾನವ ಹಕ್ಕು ಆಯೋಗ ನೇರವಾಗಿ ಆರೋಪಿಸಿತ್ತು.

ಆಸಿಡ್ ದಾಳಿ ನಡೆದಿದ್ದಾಗ ಆ ಜಿಲ್ಲೆಯ ಎಸ್​ಪಿ(ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)ಯಾಗಿ ಕಾರ್ಯನಿರ್ವಹಿಸಿದ್ದು ಇದೇ ಹುಬ್ಬಳ್ಳಿ ಮೂಲದ ಕನ್ನಡಿಗ ವಿಶ್ವನಾಥ್ ಸಜ್ಜನರ್. ಅಂದು ಆಸಿಡ್ ದಾಳಿ ನಡೆಸಿದ್ದ ಯುವಕರನ್ನು ಸ್ಥಳ ಮಹಜರ್ ಮಾಡಲು ಇವರ ನೇತೃತ್ವದಲ್ಲೇ ತೆರಳಲಾಗಿತ್ತು. ಆದರೆ, ಹೀಗೆ ಸ್ಥಳ ಮಹಜರ್ ಮಾಡಲು ತೆರಳಿದ್ದ ಯುವಕರು ಕೊನೆಗೆ ವಿಶ್ವನಾಥ್ ಅವರ ಗುಂಡಿಗೆ ಬಲಿಯಾಗಿದ್ದರು.

Comments are closed.