
ಹೈದರಾಬಾದ್: ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ 3.30 ರ ಸುಮಾರಿಗೆ ಎನ್ ಕೌಂಟರ್ ಮಾಡಲಾಗಿದೆ. ಎನ್ಕೌಂಟರ್ ಮಾಡಿದ ಪೊಲೀಸ್ ಆಯುಕ್ತರು ಕರ್ನಾಟಕದ ಹುಬ್ಬಳ್ಳಿ ಮೂಲದವರು ಎನ್ನುವುದು ವಿಶೇಷ. ಮಾತ್ರವಲ್ಲ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರು ಪಡೆದಿದ್ದಾರೆ.
ಹುಬ್ಬಳ್ಳಿಯ ವಿಶ್ವನಾಥ್ ಸಜ್ಜನರ್ ಸೈಬರಾಬಾದ್ನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಅತ್ಯಾಚಾರ ಪ್ರಕರಣವನ್ನು ಇವರ ನೇತೃತ್ವದ ತಂಡವೇ ತನಿಖೆ ನಡೆಸುತ್ತಿತ್ತು. ಕಳೆದ ಒಂದೂವರೆ ವರ್ಷಗಳ ಹಿಂದೆ ಇವರು ಸೈಬರಾಬಾದ್ನಲ್ಲಿ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದರು.
ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋದಾಗ ಆರೋಪಿಗಳಾದ ಆರಿಫ್, ಶಿವ, ಚನ್ನಕೇಶವಲು ಮತ್ತು ನವೀನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೋಲಿಸರು ಫೈರಿಂಗ್ ನಡೆಸಿದ್ದಾರೆ.
ಶಾದ್ನಗರದ ಚಟಾನ್ಪಲ್ಲಿ ಬ್ರಿಡ್ಜ್ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದಾಗ ಪೋಲಿಸ್ ಫೈರಿಂಗ್ ಆಗಿದ್ದು, ನ್ಯಾಷನಲ್ ಹೈವೇ 44 ರಲ್ಲಿ ಈ ಘಟನೆ ನಡೆದಿದೆ.
ಎನ್ ಕೌಂಟರ್ ಸ್ಪೆಷಲಿಸ್ಟ್ ವಿ.ಸಿ ಸಜ್ಜನರ್, ಈ ಹಿಂದಿನ ಘಟನೆಯನ್ನು ನೆನಪಿಸಿದ ಟ್ವಿಟ್ಟರ್:
ಈ ಹಿಂದೆ 2008ರಲ್ಲಿ ಹೈದರಾಬಾದ್ ವಾರಂಗಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಸ್ವಪ್ನಿಕಾ ಮತ್ತು ಪ್ರಣೀತಾ ಎಂಬಿಬ್ಬರು ಗೆಳತಿಯರ ಮೇಲೆ ದುಷ್ಕರ್ಮಿಗಳು ನಡೆಸಿದ ಈ ದಾಳಿ ಆಂದ್ರದಲ್ಲಿ ಭಾರಿ ಸುದ್ದಿ ಮಾಡಿತ್ತು.
ಇದರಲ್ಲಿ ಸ್ವಪ್ನಿಕಾ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು. ಘಟನೆಯ ಮೂವರು ಆರೋಪಿಗಳಾದ ಶ್ರೀನಿವಾಸ್ , ಸಂಜಯ್ ಮತ್ತು ಹರಿಕೃಷ್ಣ ಪೊಲೀಸರ ಮೇಲೆ ದಾಳಿಗೆ ಮುಂದಾದಾಗ ಎನ್ ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಅಂದು ಕೂಡ ಈ ಪ್ರಕರಣದ ನೇತೃತ್ವ ವಹಿಸಿದ್ದವರು ವಿ.ಸಿ ಸಜ್ಜನರ್.
ಇಂದು ನಡೆದಿರುವ ಎನ್ ಕೌಂಟರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿದ್ದು, ಎನ್ ಕೌಂಟರ್ ಸ್ಪೆಷಲಿಸ್ಟ್ ವಿ.ಸಿ ಸಜ್ಜನರ್ ಅವರಿಗೆ ಧನ್ಯವಾದ ಎಂದು 2008ರ ವಾರಂಗಲ್ ಎನ್ ಕೌಂಟರ್ ಘಟನೆಯನ್ನು ಕೂಡ ನೆನಪಿಸಿಕೊಳ್ಳುತ್ತಿದ್ದಾರೆ.
Comments are closed.