
ಬೆಂಗಳೂರು (ನ.30): ರಾಜ್ಯದ ಜನಪ್ರತಿನಿಧಿಗಳು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಪ್ರಕರಣಕ್ಕೆ ದಿನ ದಿನ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅವರಿಂದ ರಾಜಕಾರಣಿಗಳ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಚ್ಚರಿ ಎಂದರೆ, ಈ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಕೋರಿ, ಸಿಸಿಬಿ ಕಚೇರಿಗೆ ಶಾಸಕರು ಹಾಗೂ ಅಧಿಕಾರಿಗಳು ಆಗಮಿಸುತ್ತಿದ್ದಾರೆ.
ಹನಿಟ್ರ್ಯಾಪ್ ಮಾಡಿದವರಿಂದ ಪಡೆಯಲಾದ ರಾಜಕಾರಣಿಗಳ ಖಾಸಗಿ ವಿಡಿಯೋಗಳು ಸಾಕ್ಷ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ವಿಡಿಯೋಗಳನ್ನೇ ಡಿಲೀಟ್ ಮಾಡುವಂತೆ ತನಿಖಾಧಿಕಾರಿಗಳ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಹೀಗಾಗಿ ದಿನಕ್ಕೊಬ್ಬರಂತೆ ಸಿಸಿಬಿ ಕಚೇರಿಗೆ ತೆರಳಿ ಸಿಸಿಬಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬರುತ್ತಿದ್ದಾರೆ ಎನ್ನಲಾಗಿದೆ.
ಹನಿಟ್ರ್ಯಾಪ್ ಆರೋಪಿಗಳನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಈ ಮೂಲಕ ಯಾವುದೇ ಗುಟ್ಟು ಹೊರ ಬರದಂತೆ ನೋಡಿಕೊಳ್ಳಲಾಗುತ್ತಿದೆ.
ವಿಡಿಯೋ ಬಯಲಾದ್ರೆ ಸಂಕಷ್ಟ:
ಇಬ್ಬರು ಅನರ್ಹ ಶಾಸಕರು ಸೇರಿ 10 ಶಾಸಕರನ್ನು ಹನಿಟ್ರ್ಯಾಪ್ ಮಾಡಲಾಗಿದೆ. ಇವರ ಖಾಸಗಿ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದೊಮ್ಮೆ ಈ ವಿಡಿಯೋಗಳು ಹೊರ ಬಂದರೆ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
10 ಹೆಚ್ಚು ಶಾಸಕರು ಟ್ರ್ಯಾಪ್:
ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಶಾಸಕರನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ತಮ್ಮ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.
ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಪೆನ್ಡ್ರೈವ್, ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. 6 ಮೊಬೈಲ್ಗಳಲ್ಲಿ ಹನಿ ಟ್ರ್ಯಾಪ್ಗೆ ಒಳಗಾದ ಶಾಸಕರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
Comments are closed.