ಕರ್ನಾಟಕ

ಫಲಿತಾಂಶ ಕೈಕೊಟ್ಟರೆ ರಾಜೀನಾಮೆಗೆ ಸಿದ್ಧವಿರಲು ನಾಲ್ವರು ಶಾಸಕರಿಗೆ ಸೂಚನೆ?

Pinterest LinkedIn Tumblr


ಬೆಂಗಳೂರು(ನ. 30): ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಐದಾರು ಸ್ಥಾನ ಸಿಗಬಹುದು ಎಂದು ಗುಪ್ತಚರರು ಸಿಎಂಗೆ ವರದಿ ನೀಡಿವೆ ಎಂದು ಆ ಪಕ್ಷದ ಕೆಲ ಮೂಲಗಳು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸರ್ಕಾರ ಉಳಿಸಿಕೊಳ್ಳಲು ದಾರಿ ಹುಡುಕುತ್ತಿದೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಲು ಕಾರಣವಾಗಿದ್ದ ಆಪರೇಷನ್ ಕಮಲವನ್ನು ತನ್ನ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಮುಂದುವರಿಸುವುದು ಬಿಜೆಪಿಯ ಯೋಜನೆಯಾಗಿದೆ. ಒಂದು ವೇಳೆ, ಉಪಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದೇ ಹೋದರೆ ಆಪರೇಷನ್ ಕಮಲದ ಮೂಲಕ ನಾಲ್ಕೈದು ಶಾಸಕರನ್ನು ಸೆಳೆಯಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಈ ಉನ್ನತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ನಾಲ್ವರು ಶಾಸಕರ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ ಅವರ ಆಪ್ತ ಮುಖಂಡರು ಎರಡು ದಿನಗಳ ಹಿಂದೆ ಈ ನಾಲ್ವರು ಶಾಸಕರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್​ನ ಇಬ್ಬರು ಮತ್ತು ಜೆಡಿಎಸ್​ನ ಇಬ್ಬರು ಶಾಸಕರು ಇದಕ್ಕೆ ಒಪ್ಪಿಕೊಂಡಿದ್ಧಾರೆ. ಫಲಿತಾಂಶ ನೋಡಿಕೊಂಡು ತಾವು ರಾಜೀನಾಮೆ ನೀಡುವುದಾಗಿ ಈ ನಾಲ್ವರು ಶಾಸಕರು ಭರವಸೆ ನೀಡಿದ್ದಾರೆನ್ನಲಾಗಿದೆ. ಆದರೆ, ಈ ನಾಲ್ವರು ಶಾಸಕರು ಯಾರೆಂಬುದು ಇನ್ನೂ ಗೊತ್ತಾಗಿಲ್ಲ.

224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಒಟ್ಟು 17 ಶಾಸಕರು ಅನರ್ಹಗೊಂಡಿದ್ದಾರೆ. ಈ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆಯಾಗುತ್ತಿದೆ. ಬಿಜೆಪಿ ಬಳಿ ಸದ್ಯ ಒಬ್ಬ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು 106 ಸದಸ್ಯರ ಬಲವಿದೆ. ತನ್ನ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಈ ಉಪಚುನಾವಣೆಯಲ್ಲಿ ಕನಿಷ್ಠ 6 ಕ್ಷೇತ್ರವನ್ನಾದರೂ ಗೆಲ್ಲುವ ಅನಿವಾರ್ಯತೆಗೆ ಸಿಲುಕಿದೆ. 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಿಕ್ಕರೆ ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುವ ಸಾಧ್ಯತೆ ಕಡಿಮೆ. ಆದರೆ, ಹತ್ತಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಗೆಲುವು ಬಂದರೆ ಸರ್ಕಾರವನ್ನು ಹೆಚ್ಚು ಬಲಪಡಿಸಲು ಬಿಜೆಪಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಆಪರೇಷನ್​ಗೆ ಕೈ ಹಾಕಬಹುದು ಎನ್ನುತ್ತವೆ ಬೇರೆ ಮೂಲಗಳು.

Comments are closed.