ರಾಷ್ಟ್ರೀಯ

ಫಾಸ್ಟ್‌ಟ್ಯಾಗ್ ಡೆಡ್‌ಲೈನ್ ಡಿಸೆಂಬರ್ 15 ತನಕ ವಿಸ್ತರಣೆ

Pinterest LinkedIn Tumblr

ಹೆದ್ದಾರಿಗಳ ಟೋಲ್‌ಗಳಲ್ಲಿ ಆಗುತ್ತಿದ್ದ ವಿಳಂಭವನ್ನು ತಪ್ಪಿಸಲು ಡಿಸೆಂಬರ್ 1 ರಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ್ದ ಸರ್ಕಾರ ಈ ಅನುಷ್ಟಾನವನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿದೆ. ಡಿಸೆಂಬರ್ 1ರ ಬದಲು ಡಿಸೆಂಬರ್ 15ರಿಂದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಪ್ರವೇಶಿಸುವ ವಾಹನಗಳಿಗೆ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿದೆ.

2019 ಡಿಸೆಂಬರ್ 1 ರಿಂದ ಖಾಸಗಿ ಮತ್ತು ವಾಣಿಜ್ಯ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದರು. ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಟೋಲ್ ಸ್ವೀಕರಿಸಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

‘ಸಾರ್ವಜನಿಕರು ಫಾಸ್ಟ್‌ಟ್ಯಾಗ್ ಖರೀದಿಸಲು ಮತ್ತು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯವನ್ನು ಒದಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರ ಬದಲು ಡಿಸೆಂಬರ್ 15 ರಿಂದ ಫಾಸ್ಟ್‌ಟ್ಯಾಗ್ ಇಲ್ಲದೆ ಫಾಸ್ಟ್‌ಟ್ಯಾಗ್ ಲೇನ್ ಪ್ರವೇಶಿಸುವ ವಾಹನಗಳಿಗೆ ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುವುದು ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ತಿಳಿಸಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯ ತೀರ್ಮಾನ ಹೊರಬೀಳುತ್ತಿದ್ದಂತೆ ಫಾಸ್ಟ್‌ಟ್ಯಾಗ್ ಖರೀದಿಸುವವರ ಪ್ರಮಾಣ ಹೆಚ್ಚಾಗಿದೆ. ನವೆಂಬರ್‌ 27(ಬುಧವಾರ) ವರೆಗೂ 70 ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದ್ದು, ನವೆಂಬರ್ 26ರಂದು ಅತಿ ಹೆಚ್ಚು 1,35,583 ಟ್ಯಾಗ್‌ಗಳನ್ನು ವಿತರಿಸಲಾಗಿದೆ. ಅದರ ಹಿಂದಿನ 1.03 ಲಕ್ಷ ಫಾಸ್ಟ್‌ಟ್ಯಾಗ್ ಮಾರಾಟವಾಗಿದೆ.

ಡಿಸೆಂಬರ್ 1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಎಂಬ ಅಧಿಸೂಚನೆ ಹೊರಬೀಳುತ್ತಿದ್ದಂತೆ ಫಾಸ್ಟ್‌ಟ್ಯಾಗ್ ಖರೀದಿ ಸಂಖ್ಯೆ ಹೆಚ್ಚಳವಾಗಿದ್ದು, ದೈನಂದಿನ ವಿತರಣೆಯು ಶೇಕಡಾ 330ರಷ್ಟು ಹೆಚ್ಚಾಗಿದೆ.

Comments are closed.