ಕರ್ನಾಟಕ

ಕಾರ್ಟೊಸ್ಯಾಟ್-3 ಉಪಗ್ರಹ ಸೇರಿದಂತೆ 14 ವಾಣಿಜ್ಯ ಪುಟ್ಟ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಉಡಾವಣೆ

Pinterest LinkedIn Tumblr

ಆಂಧ್ರಪ್ರದೇಶ: ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ಕಟ್ಟಕಡೆ ಕ್ಷಣದಲ್ಲಿ ವಿಫಲಗೊಂಡರೂ ಧೃತಿಗೆಡದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಅಂತರಿಕ್ಷ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಭೂಮಿಯ ಮೇಲೆ ನಿಗಾ ಇಡುವ ಕಾರ್ಟೊಸ್ಯಾಟ್-3 ಉಪಗ್ರಹ ಸೇರಿದಂತೆ ಅಮೆರಿಕಾದ 13 ವಾಣಿಜ್ಯ ಪುಟ್ಟ ಉಪಗ್ರಹಗಳನ್ನು ಇಸ್ರೋ ಇಂದು ಬೆಳಗ್ಗೆ ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿರುವ ದ್ವಿತೀಯ ಉಡಾವಣಾ ವಿಭಾಗದಿಂದ ಇಂದು ಬೆಳಗ್ಗೆ 9.28ರಲ್ಲಿ ಒಟ್ಟು 14 ಉಪಗ್ರಹಗಳನ್ನು ಹೊತ್ತ 44.4 ಮೀಟರ್‍ಗಳಷ್ಟು ಎತ್ತರದ ಪಿಎಸ್‍ಎಲ್‍ವಿ ಸಿ-17 ರಾಕೆಟ್ ಉಡ್ಡಾಯಣವಾಯಿತು. ಮೋಡ ಕವಿದ ವಾತಾವರಣ ರಾಕೆಟ್ ಉಡಾವಣೆಗೆ ಪೂರಕ ವಾತಾವರಣ ಒದಗಿಸಿತ್ತು.

ಉಡಾವಣೆಗೊಂಡ ಬಳಿಕ 17 ನಿಮಿಷ 46 ಸೆಕೆಂಡ್‍ಗಳಲ್ಲಿ ಕಾರ್ಟೊಸ್ಯಾಟ್-3 ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಯಿತು. ಇದು ಭಾರತದ ಅತ್ಯಂತ ಸಂಕೀರ್ಣ ಮತ್ತು ಸುಧಾರಿತ ಭೂವೀಕ್ಷಣೆ ಉಪಗ್ರಹವಾಗಿದೆ. ಅಮೆರಿಕಾದ ಎಲ್ಲಾ 13 ಪುಟ್ಟ ವಾಣಿಜ್ಯ ಉಪಗ್ರಹಗಳು 26 ನಿಮಿಷ 56 ಸೆಕೆಂಡ್‍ಗಳಲ್ಲಿ ಕಕ್ಷೆ ತಲುಪುವಲ್ಲಿ ಸಫಲವಾದವು. ಎಲ್ಲಾ 14 ಉಪಗ್ರಹಗಳು ಯಶಸ್ವಿಯಾಗಿ ಉಡ್ಡಾಯಣಗೊಂಡು ನಿಗದಿತ ಕಕ್ಷೆ ಸೇರುತ್ತಿದ್ದಂತೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತು ಇತರ ವಿಜ್ಞಾನಿಗಳು ಚಪ್ಪಾಳೆ ಮೂಲಕ ಸಂತಸದ ಸಂಭ್ರಮ ಹಂಚಿಕೊಂಡರು.

ಸೆ.7 ರಂದು ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದಿರನ ಮೇಲ್ಮೈ ಮೇಲೆ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ರಭಸವಾಗಿ ಅಪ್ಪಳಿಸಿ ಇಸ್ರೋ ಜೊತೆ ಸಂಪರ್ಕ ಕಡಿತಗೊಂಡಿತ್ತು. ಯಶಸ್ಸಿನ ಕೊನೆ ಹಂತದಲ್ಲೇ ಈ ಮಹತ್ವದ ಯೋಜನೆ ವಿಫಲವಾಗಿದ್ದರಿಂದ ಇಸ್ರೋ ವಿಜ್ಞಾನಿಗಳಿಗೆ ಭಾರೀ ನಿರಾಸೆಯಾಗಿತ್ತು.

ಚಂದ್ರಯಾನ-2 ವಿಫಲದ ನಂತರ (ಶೇ.90ರಷ್ಟು ಯಶಸ್ಸು) 14 ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಯಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಇದೇ ವೇಳೆ ಚಂದ್ರಯಾನ-3 ಇಸ್ರೋ ಸಜ್ಜಾಗುತ್ತಿದ್ದು, ಇದಕ್ಕೆ ಅಗತ್ಯವಾದ ನೀಲನಕ್ಷೆ ಸಿದ್ದಗೊಂಡಿದೆ.

ಪ್ರಧಾನಿ ಶುಭಾಶಯ: ಇಸ್ರೋ 14 ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಚಿಮ್ಮಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಸ ವ್ಯಕ್ತಪಡಿಸಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

Comments are closed.