ಕರಾವಳಿ

‘ಯಕ್ಷಗಾನಕ್ಕೆ ಹಿರಿಯ ಕಲಾವಿದರ ಕೊಡುಗೆ ಅಪಾರ’: ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮರಣೆ ಸಮಾರಂಭದಲ್ಲಿ ಅಯ್ಯರ್

Pinterest LinkedIn Tumblr

ಮಂಗಳೂರು: ‘ ಯಕ್ಷಗಾನ ಪರಂಪರಾಗತವಾಗಿ ಬಂದ ಕಲೆ. ಅದರಲ್ಲಿ ದುಡಿದ ಅನೇಕ ಹಿರಿಯ ಕಲಾವಿದರು ಈಗ ನಮ್ಮೊಂದಿಗಿಲ್ಲ; ಆದರೆ ಅವರ ಕೊಡುಗೆ ಅಪಾರ. ಅದನ್ನು ನೆನಪಿಟ್ಟು ಮುಂದಿನವರಿಗೆ ತುಂಬಾ ಜತನದಿಂದ ದಾಟಿಸುವ ಅಗತ್ಯವಿದೆ ‘ ಎಂದು ಕೋಟೆಕಾರಿನ ಶೃಂಗೇರಿ ಶ್ರೀ ಶಾರದಾ ಮಠ ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ್ ಅಯ್ಯರ್ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಮಂಗಳೂರು ವಿ‌.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ಐದನೇ ದಿನ ಪ್ರಸಿದ್ಧ ಯಕ್ಷಗಾನ ಹಾಸ್ಯಪಟು ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರ ಸಂಸ್ಮರಣಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ‘ತಾಳಮದ್ದಳೆ ಸಪ್ತಾಹದೊಂದಿಗೆ ಅಗಲಿದ ಕಲಾವಿದರನ್ನು ಸ್ಮರಿಸಿ ಅವರ ಸಾಧನೆಯನ್ನು ಕೊಂಡಾಡಲು ವೇದಿಕೆ ಕಲ್ಪಿಸಿರುವ ಯಕ್ಷಾಂಗಣದ ಕಾರ್ಯ ಸ್ತುತ್ಯವಾದುದು’ ಎಂದರು. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಲ. ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ನುಡಿನಮನ ಸಲ್ಲಿಸಿದರು.

ಕಾವೂರು ಬಂಟರ ಸಂಘದ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಮತ್ತು ಕಲಾ ಸಂಘಟಕ ಶಾಂತಾರಾಮ ಕುಡ್ವ ಮೂಡಬಿದ್ರಿ ಮುಖ್ಯ ಅತಿಥಿಗಳಾಗಿದ್ದರು. ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ಪದ್ಮನಾಭ ಶೆಟ್ಟಿ ಬೆಟ್ಟಂಪಾಡಿ ಮತ್ತು ಡಾ.ಸೂರಜ್ ಶೆಟ್ಟಿ ವೇದಿಕೆಯಲ್ಲಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.

ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು. ಕಾರ್ಯದರ್ಶಿ ಉಮೇಶ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ದರು. ಪದಾಧಿಕಾರಿಗಳಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ,ಅಶೋಕ ಮಾಡ ಕುದ್ರಾಡಿಗುತ್ತು, ತೋನ್ಸೆ ಪುಷ್ಕಳಕುಮಾರ್,ಕರುಣಾಕರ ಶೆಟ್ಟಿ ಪಣಿಯೂರು, ಕೆ.ರವೀಂದ್ರ ರೈ ಕಲ್ಲಿಮಾರು, ಸುಧಾಕರ ರಾವ್ ಪೇಜಾವರ, ಕೆ‌.ಲಕ್ಷ್ಮೀನಾರಾಯಣ‌ ರೈ ಹರೇಕಳ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.

ಸಮಾರಂಭದ ಬಳಿಕ ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಯಲ್ಲಿ ‘ಸಂಧಾನ ಸಪ್ತಕ’ ದ ಐದನೇ ಪ್ರಸಂಗ ‘ಸುಭದ್ರಾ ಸಂಧಾನ’ ಯಕ್ಷಗಾನ ತಾಳಮದ್ದಳೆ ಜರಗಿತು.

Comments are closed.