ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಮಾದರಿಯ ಟೈಡಾಲ್ ಮಾತ್ರೆಯನ್ನು ಸಿರಿಂಜ್ ಮೂಲಕ ಸೇವಿಸಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್ನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ನ. 20ರಂದು ನಡೆದ ಪಾರ್ಟಿಯಲ್ಲಿ ಇಬ್ಬರು ಯುವತಿಯರೂ ಸೇರಿದಂತೆ 11 ಜನ ಪಾಲ್ಗೊಂಡಿದ್ದರು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. 9 ಜನರ ಸ್ಥಿತಿ ಗಂಭೀರವಾಗಿತ್ತು. ಆ ಡ್ರಗ್ಸ್ ಎಲ್ಲಿಂದ ಖರೀದಿಸಿದ್ದಾರೆಂಬುದರ ಪತ್ತೆ ಮಾಡಿದ ಪೊಲೀಸರಿಗೆ ರಾಜಾಜಿನಗರ ಮನ್ ದೀಪ್ ಫಾರ್ಮ್ನಲ್ಲಿ , ಸಿರಿಂಜ್, ಡಿಸ್ಟಿಲ್ ವಾಟರ್ ಖರೀದಿ ಮಾಡಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಔಷಧ ಮಾರಾಟ ಮಾಡಿದ್ದ ಆ ಮೆಡಿಕಲ್ ಶಾಪ್ ಮಾಲೀಕನನ್ನು ಬಂಧಿಸಿದ್ದಾರೆ. ಮೃತ ಗೋಪಿ ಮೆಡಿಕಲ್ ಶಾಪ್ ಗೆ ತೆರಳಿ ಮಾತ್ರೆ ಖರೀದಿಸಿ ತಂದಿದ್ದ. ಬಳಿಕ ವೈಯಾಲಿಕಾವಲ್ನ ಅಭಿಷೇಕ್ ಮನೆಯಲ್ಲಿ ಮೂವರು ಡಿಸ್ಟಿಲ್ ವಾಟರ್ ನಲ್ಲಿ ಮಾತ್ರೆಯನ್ನು ಕ್ರಶ್ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡಿದ್ದರು. ಹೆಚ್ಚಿನ ಡೋಸೇಜ್ ಇದ್ದ ಹಿನ್ನಲೆಯಲ್ಲಿ ಅಸ್ವಸ್ಥಗೊಂಡು, ಅಭಿಷೇಕ್ ಮತ್ತು ಗೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.ಇದೇ ಮಾದರಿಯಲ್ಲಿ ಸುಹಾಸ್ ಅಲಿಯಾಸ್ ಚಿಟ್ಟೆಗೂ ಡ್ರಗ್ಸ್ ಇಂಜೆಕ್ಟ್ ಮಾಡಲಾಗಿತ್ತು. ಸದ್ಯ ಸುಹಾಸ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಶನಿವಾರದಿಂದ ಸೋಮವಾರದವರೆಗೆ ಮಲ್ಲೇಶ್ವರದ ಕೋದಂಡರಾಮಪುರದ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ನಡೆದಿತ್ತು. ಜಾತ್ರೆಯ ಕಡೆಯ ದಿನವಾದ ಸೋಮವಾರ ರಾತ್ರಿ ಗೆಳೆಯರೆಲ್ಲ ಮಲ್ಲೇಶ್ವರದ ಫ್ಲವರ್ ಮಾರ್ಕೆಟ್ನ ಬಿಬಿಎಂಪಿ ಗ್ರೌಂಡ್ ಬಳಿ ಸೇರಿ ಪಾರ್ಟಿ ಮಾಡಿದ್ದರು. ಈ ಗುಂಪಿನಲ್ಲಿದ್ದ ಓರ್ವನ ಹುಟ್ಟುಹಬ್ಬ ಆಚರಣೆ ಮಾಡಲು ಇವರು ಇಲ್ಲಿ ಸೇರಿದ್ದರು.
ತಡರಾತ್ರಿವರೆಗೂ ಗೆಳೆಯರೊಂದಿಗೆ ಪಾರ್ಟಿ ಮಾಡಿ ನಂತರ ಇವರು ಮನೆಗೆ ತೆರಳಿದ್ದರು. ಬೆಳಗಿನ ಜಾವ ಎಲ್ಲರಿಗೂ ತೀವ್ರ ಜ್ವರ, ತಲೆಸುತ್ತು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಪೈಕಿ ತೀವ್ರ ಅಸ್ವಸ್ಥಗೊಂಡ ಅಭಿಷೇಕ್ ಹಾಗೂ ಗೋಪಿ ಮೃತಪಟ್ಟಿದ್ದರು. ಟೈಡಾಲ್ ಮಾದಕವಸ್ತು ರೀತಿಯಲ್ಲಿರೋ ಮಾತ್ರೆಯಾಗಿದ್ದು, ಇದನ್ನು ಡಿಸ್ಟಿವಾಟರ್ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದರು. ಪಾಲಕರು ಮರ್ಯಾದೆಗೆ ಅಂಜಿ ಮಕ್ಕಳು ಗಾಂಜಾ ಸೇವನೆ ಮಾಡಿದ್ದನ್ನು ಮುಚ್ಚಿಟ್ಟರು ಎನ್ನುವ ಮಾತು ಕೇಳಿಬಂದಿತ್ತು.

Comments are closed.