
ನವದೆಹಲಿ(ಅ.11): ಫೋರ್ಬ್ಸ್ನ 2019ರ ಸಾಲಿನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಉದ್ಯಮಿ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಪ್ರಥಮ ಸ್ಥಾನ ಸಿಕ್ಕಿದೆ. ಸತತ 12ನೇ ವರ್ಷವೂ ಮುಕೇಶ್ ಅಂಬಾನಿ ಅವರೇ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಭಾರತದ ಆರ್ಥಿಕತೆ ಸಂಕಷ್ಟದ ನಡುವೆಯೂ ಮುಕೇಶ್ ಅಂಬಾನಿಯವರು 51.4 ಬಿಲಿಯನ್ ಡಾಲರ್ ಆಸ್ತಿಯ ಒಡೆಯರಾಗಿದ್ದಾರೆ. ಇನ್ನೊಂದೆಡೆ ಕೈಗಾರಿಕೋದ್ಯಮಿ ಅದಾನಿ ಆದಾಯ 15.7 ಬಿಲಿಯನ್ ಡಾಲರ್ ಆಗಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.
ರಿಲಾಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಹಿಂದಿನ ವರ್ಷದ ಲಾಭದ ಪ್ರಮಾಣ ಶೇ. 03ರಷ್ಟು ಏರಿತ್ತು. ಮುಕೇಶ್ ಅಂಬಾನಿ ಮಾಲಿಕತ್ವದ ಆರ್ಐಎಲ್ ಸಂಸ್ಥೆ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು. ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು.
ಇನ್ನು, ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ರಿಲಾಯನ್ಸ್ನ ಜಿಯೋ ಕೂಡ ಲಾಭದಲ್ಲಿ ಹೆಚ್ಚಾಗಿರುವುದನ್ನು ತೋರಿಸಿದೆ. ಏಪ್ರಿಲ್-ಮೇ-ಜೂನ್ ತ್ರೈಮಾಸಿಕದಲ್ಲಿ ಜಿಯೋ 612 ಕೋಟಿ ರೂ ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಹೊಂದಿದ್ದ ಜಿಯೋದ ಲಾಭ ಗಳಿಕೆ ಈ ಬಾರಿ ಶೇ. 20ರಷ್ಟು ಹೆಚ್ಚಳವಾಗಿದೆ.
ಮುಖೇಶ್ ಅಂಬಾನಿ ಅವರು ಭಾರತದ ಅತ್ಯಂತ ದೊಡ್ಡ ಶ್ರೀಮಂತ. ಇವರು ಜಿಯೋ ಮೂಲಕ ಕಳೆದ ಮೂರು ವರ್ಷದಲ್ಲಿ ತಮ್ಮ ನಿವ್ವಳ ಮೌಲ್ಯಕ್ಕೆ 4.1 ಬಿಲಿಯನ್ ಡಾಲರ್ ಸೇರಿಸಿದ್ದಾರೆ ‘ಎಂದು ಫೋರ್ಬ್ಸ್ ಹೇಳಿದೆ. ಇನ್ನು ಪಟ್ಟಿಯಲ್ಲಿರುವ ಕ್ರಮವಾಗಿ, ಹಿಂದುಜಾ ಸಹೋದರರು, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್, ಶಿವ್ ನಡಾರ್, ರಾಧಾಕೃಷ್ಣನ್ ದಮನಿ, ಗೋದ್ರೇಜ್ ಕುಟುಂಬ, ಲಕ್ಷ್ಮಿ ಮಿತ್ತಲ್ ಮತ್ತು ಕುಮಾರ ಮಂಗಲಂ ಇದ್ದಾರೆ.
Comments are closed.