
ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವಂತೆಯೇ ಇತ್ತ ಸುಪ್ರೀಂ ಕೋರ್ಟ್ ಸಿಎಂ ದೇವೇಂದ್ರ ಫಡ್ನವಿಸ್ ಗೆ ಶಾಕ್ ನೀಡಿದೆ.
ಸಿಎಂ ದೇವೇಂದ್ರ ಫಡ್ನವಿಸ್ ಅವರ ವಿರುದ್ಧದ ನಾಮಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ್ ಭೋಸ್ ಅವರನ್ನೊಳಗೊಂಡ ಪೀಠ ತನಿಖೆಗೆ ಆದೇಶ ನೀಡಿದೆ.
2014ರಲ್ಲಿ ಫಡ್ನವೀಸ್ ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಇದರ ಹೊರತಾಗಿಯೂ ಫಡ್ನವಿಸ್ ತಮ್ಮ ನಾಮಪತ್ರದಲ್ಲಿ ಈ ಕುರಿತು ಯಾವುದೇ ರೀತಿಯ ಉಲ್ಲೇಖ ಮಾಡದೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಕುರಿತಂತೆ ಸತೀಶ್ ಯುಕೆ ಎಂಬುವವರು ಬಾಂಬೇ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಉಮೇದುವಾರಿಕೆ ಪತ್ರದಲ್ಲಿ ಈ ಬಗ್ಗೆ ಅವರು ವಿವರ ನೀಡದೆ ಮರೆ ಮಾಚಿದರೆ ಆದ್ದರಿಂದ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಕೋರಿದ್ದರು. ಇತ್ಯರ್ಥಕ್ಕಾಗಿ ಬಾಕಿ ಉಳಿದ ಎರಡು ಕ್ರಿಮಿನಲ್ ಪ್ರಕರಣಗಳನ್ನು ತಮ್ಮ ನಾಮಪತ್ರದಲ್ಲಿ ಬಹಿರಂಗಗೊಳಿಸದೆ ಚುನಾಯಿತ ರಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಸತೀಶ್ ಕೇಳಿದ್ದರು. ಆದರೆ ಸತೀಶ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು.
ಹೀಗಾಗಿ ಸತೀಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸತೀಶ್ ಅವರ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಬಾಂಬೇ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿ, ಪ್ರಕರಣದ ತನಿಖೆಗೆ ಆದೇಶ ನೀಡಿದೆ. ಆ ಮೂಲಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಮುಖ್ಯಮಂತ್ರಿ ಗಾದಿಯೇರಬೇಕು ಎನ್ನುವ ಫಡ್ನವಿಸ್ ಕನಸು ಡೋಲಾಯಮಾನವಾದಂತಾಗಿದೆ.
Comments are closed.