ರಾಷ್ಟ್ರೀಯ

ಸಿಖ್ ನರಮೇಧ ಪ್ರಕರಣವೊಂದರ ಮರುತನಿಖೆಗೆ ಕೇಂದ್ರ ಒಪ್ಪಿಗೆ; ಸಂಕಷ್ಟದಲ್ಲಿ ಕಮಲನಾಥ್

Pinterest LinkedIn Tumblr


ನವದೆಹಲಿ(ಸೆ. 09): ಮಧ್ಯ ಪ್ರದೇಶದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾಗಿರುವ ಕಮಲನಾಥ್ ವಿರುದ್ಧದ ಹಳೆಯ ಪ್ರಕರಣವೊಂದನ್ನು ಕೆದಕಲು ಕೇಂದ್ರ ಸರ್ಕಾರ ಅಣಿಯಾಗಿದೆ. 1984ರ ಸಿಖ್ ವಿರೋಧಿ ದಂಗೆಯಲ್ಲಿ ಕಮಲನಾಥ್ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಮರುಜೀವ ನೀಡುವ ಪ್ರಸ್ತಾವಕ್ಕೆ ಗೃಹ ಸಚಿವಾಲಯ ಹಸಿರುನಿಶಾನೆ ತೋರಿಸಿದೆ ಎಂದು ದಿ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಕಮಲನಾಥ್ ವಿರುದ್ಧ ದಾಖಲಾಗಿದ್ದ 601/84 ಕೇಸನ್ನು ಪುನಾರಂಭ ಮಾಡಲಾಗಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ವಿರುದ್ಧ ಹೊಸ ಸಾಕ್ಷ್ಯಗಳು ಸಿಕ್ಕಿವೆ. ಇಬ್ಬರು ವ್ಯಕ್ತಿಗಳು ಕಮಲನಾಥ್ ವಿರುದ್ಧ ಸಾಕ್ಷಿ ಹೇಳಲು ಸಿದ್ಧರಾಗಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ ಪಕ್ಷದ ಮುಖಂಡ ಮಂಜೀಂದರ್ ಸಿರ್ಸಾ ಟ್ವೀಟ್ ಮಾಡಿದ್ಧಾರೆ.

ಶಿರೋಮಣಿ ಅಕಾಲಿ ದಳವು ಕಳೆದ ವರ್ಷ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಗೃಹ ಸಚಿವಾಲಯಕ್ಕೆ ನೀಡಿತಂತೆ. ಅದರಂತೆ ಸಚಿವಾಲಯವು ಈಗ ಪ್ರಕರಣದ ಮರುವಿಚಾರಣೆಗೆ ಅನುಮತಿ ನೀಡಿದೆ. ವಿಶೇಷ ತನಿಖಾ ತಂಡವು ಕಮಲನಾಥ್ ವಿರುದ್ಧ ಹೊಸದಾಗಿ ತನಿಖೆ ನಡೆಸಲಿದೆ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ಅನೇಕ ಕಡೆ, ಅದರಲ್ಲೂ ಹೆಚ್ಚಾಗಿ ದೆಹಲಿಯಲ್ಲಿ ಸಿಖ್ಖರನ್ನು ಗುರಿಯಾಗಿಸಿಕೊಂಡು ಗಲಭೆಗಳಾಗಿದ್ದವು. ಆ ಸಂದರ್ಭದಲ್ಲಿ ಸಾವಿರಾರು ಸಿಖ್ಖರ ನರಮೇಧವಾಗಿತ್ತು. ಕಾಂಗ್ರೆಸ್ ಪಕ್ಷದ ನಾಯಕರೇ ಈ ಗಲಭೆಗೆ ಪ್ರಚೋದನೆಗಳನ್ನು ನೀಡಿದ್ದರೆಂಬ ಆರೋಪವಿದೆ. ಕೋರ್ಟ್​ನಲ್ಲಿ ನೂರಾರು ಮಂದಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿದೆ. 49 ಮಂದಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿದೆ.

ದೆಹಲಿಯ ಗುರುದ್ವಾರ ರಕಬ್​ಗಂಜ್ ಎಂಬಲ್ಲಿ ನಡೆದಿದ್ದ ಗಲಭೆಯಲ್ಲಿ ಕಮಲನಾಥ್ ಅವರೂ ಶಾಮೀಲಾಗಿದ್ದರೆಂಬುದು ಶಿರೋಮಣಿ ಅಕಾಲಿ ದಳದ ಆರೋಪವಾಗಿದೆ. ಅದೇ ಪ್ರಕರಣವನ್ನೇ ಈಗ ರೀಓಪನ್ ಮಾಡಲಾಗಿರುವುದು.

ಪಿ. ಚಿದಂಬರಮ್ ಮತ್ತು ಡಿಕೆ ಶಿವಕುಮಾರ್ ಅವರು ವಿವಿಧ ಪ್ರಕರಣಗಳಲ್ಲಿ ಕಸ್ಟಡಿಗೆ ಒಳಪಟ್ಟು ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಈಗ ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡನ ವಿರುದ್ಧದ ಹಳೆಯ ಪ್ರಕರಣಕ್ಕೆ ಮರುಜೀವ ನೀಡುತ್ತಿರುವುದು ಕೈಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

Comments are closed.