
ಲಕ್ನೋ (ಸೆ. 9): ಸಾಮಾನ್ಯವಾಗಿ ಚಾಲಕರು ಗಾಡಿ ಓಡಿಸುವಾಗ ತಮಗೆ ಯಾವುದು ಕಂಫರ್ಟಬಲ್ ಎನಿಸುತ್ತದೋ ಆ ಉಡುಗೆಯನ್ನೇ ಧರಿಸುತ್ತಾರೆ. ಆದರೆ, ಇನ್ನು ಹಾಗೆಲ್ಲ ಮಾಡುವಂತಿಲ್ಲ. ನಿಮಗೆ ಬೇಕೆನಿಸಿದ ಬಟ್ಟೆ ಹಾಕಿಕೊಂಡು ಡ್ರೈವ್ ಮಾಡಿದರೂ ಇನ್ನುಮುಂದೆ ದಂಡ ಕಟ್ಟಬೇಕಾಗುತ್ತದೆ!
ಹೌದು, ಇಂಥದ್ದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಟ್ರಕ್ ಓಡಿಸುತ್ತಿದ್ದ ಚಾಲಕನ ಬಳಿ ತನ್ನ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇದ್ದರೂ ಆತನಿಗೆ ಟ್ರಾಫಿಕ್ ಪೊಲೀಸರು 2 ಸಾವಿರ ರೂ. ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಆತ ಧರಿಸಿದ್ದ ಲುಂಗಿ! ಚಾಲಕ ಡ್ರೆಸ್ಕೋಡ್ ಅನುಕರಿಸದೆ ಲುಂಗಿ- ಧರಿಸಿ ಟ್ರಕ್ ಓಡಿಸುತ್ತಿದ್ದ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಪೊಲೀಸರು 2 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆಯಡಿ ಲಾರಿ, ಟ್ರಕ್, ಟೆಂಪೋದಂತಹ ಎಲ್ಲ ಕಮರ್ಷಿಯಲ್ ಚಾಲಕರು ಹಾಗೂ ಸಹಾಯಕರು ಡ್ರೆಸ್ಕೋಡ್ ಅನುಕರಿಸಬೇಕು. ಚಾಲಕರು ಉದ್ದನೆಯ ಪ್ಯಾಂಟ್ ಮತ್ತು ಮೈ ಮುಚ್ಚುವ ಶರ್ಟ್ ಧರಿಸಿರಬೇಕು. ಹಾಗೇ ಶೂಗಳನ್ನು ಧರಿಸಿರಬೇಕು. ಶಾಲಾ ವಾಹನಗಳ ಚಾಲಕರು ಯೂನಿಫಾರಂ ಧರಿಸಬೇಕು. ಆಟೋ ಡ್ರೈವರ್ಗಳು ಕೂಡ ಖಾಕಿ ಬಣ್ಣದ ಕೋಟ್ ಧರಿಸಬೇಕು. ಒಂದುವೇಳೆ ಲುಂಗಿ ಅಥವಾ ಟವೆಲ್ ಸುತ್ತಿಕೊಂಡು ಗಾಡಿ ಓಡಿಸಿದರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಲಕ್ನೋ ಎಎಸ್ಪಿ (ಟ್ರಾಫಿಕ್) ಪೂರ್ಣೇಂದ್ರ ಸಿಂಗ್ ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ಗೆ ಮಾಹಿತಿ ನೀಡಿದ್ದು, 1939ರಿಂದಲೂ ಲಘು ವಾಹನಗಳ ಚಾಲಕರಿಗೆ ಡ್ರೆಸ್ಕೋಡ್ ಜಾರಿಯಲ್ಲಿದೆ. ಆದರೆ, ಅದು ಸರಿಯಾಗಿ ಅಳವಡಿಕೆಯಾಗಿರಲಿಲ್ಲ. ಈ ನಿಯಮವನ್ನು ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲು ಅವಕಾಶವಿತ್ತು. ಈಗ ಆ ಮೊತ್ತವನ್ನು ಹೆಚ್ಚಳ ಮಾಡಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ.
Comments are closed.