
ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತದ ನೌಕಾ ದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ರಾಜತಾಂತ್ರಿಕ ಅಧಿಕಾರಿಗಳು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ರಾಜತಾಂತ್ರಿಕ ಸಂಬಂಧಗಳ ನಿಯಮ, ಅಂತಾರಾಷ್ಟ್ರೀಯ ಕೋರ್ಟ್ನ ತೀರ್ಪು ಹಾಗೂ ಪಾಕಿಸ್ತಾನದ ಕಾನೂನುಗಳಿಗೆ ಅನುಸಾರವಾಗಿ ಕುಲಭೂಷಣ್ ಜಾಧವ್ ಅವರಿಗೆ ಸೆ. 2ರಂದು ರಾಜತಾಂತ್ರಿಕ ಸಂಪರ್ಕದ ಅವಕಾಶ ನೀಡಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದರು. ಅಂತೆಯೇ ಇಂದು ಭಾರತದ ಕೆಲ ಅಧಿಕಾರಿಗಳು ಕುಲಭೂಷಣ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಭಾರತದ ಪರವಾಗಿ ಯಾರು ಕುಲಭೂಷಣ್ ಅವರನ್ನು ಸಂಪರ್ಕ ಮಾಡಿದ್ದಾರೆ, ಈ ಭೇಟಿ ಎಲ್ಲಿ ನಡೆದಿದೆ ಎನ್ನುವ ವಿಚಾರ ರಹಸ್ಯವಾಗಿದೆ.
ನೆದರ್ಲೆಂಡ್ಸ್ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಜುಲೈ ತಿಂಗಳಲ್ಲಿ ಈ ಪ್ರಕರಣದ ಕುರಿತು ತೀರ್ಪು ನೀಡಿತ್ತು. ಈ ವೇಳೆ ಶೀಘ್ರದಲ್ಲಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ಪಾಕಿಸ್ತಾನಕ್ಕೆ ಆದೇಶ ನೀಡಿತ್ತು. ರಾಜತಾಂತ್ರಿಕ ಭೇಟಿಗೆ ಪಾಕಿಸ್ತಾನ ಕೆಲ ಷರತ್ತುಗಳನ್ನೂ ಹಾಕಿತ್ತು. ಇದಕ್ಕೆ ಭಾರತ ಒಪ್ಪಿಕೊಂಡಿಲ್ಲ. ಬೇಷರತ್ ಆಗಿ ಕುಲಭೂಷಣ್ ಜಾಧವ್ಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಮಾಡಿಕೊಡಬೇಕೆಂಬುದು ಭಾರತದ ನಿಲುವಾಗಿತ್ತು.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು 2016, ಮಾರ್ಚ್ 3ರಂದು ಪಾಕಿಸ್ತಾನ ಬಂಧಿಸಿತ್ತು. ಭಾರತದ ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ಆಯೋಜಿಸುತ್ತಿರುವ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರನ್ನು ಖೈಬರ್ ಪಖ್ತುಂಕ್ವ ಪ್ರಾಂತ್ಯದಲ್ಲಿ ಬಂಧಿಸಿದ್ದಾಗಿ ಪಾಕ್ ಸರ್ಕಾರ ಹೇಳಿಕೊಂಡಿತ್ತು. ಆದರೆ, ವೈಯಕ್ತಿಕ ವ್ಯವಹಾರ ಸಂಬಂಧ ಇರಾನ್ ದೇಶಕ್ಕೆ ಹೋಗಿದ್ದಾಗ ಪಾಕಿಸ್ತಾನದವರು ಅಕ್ರಮವಾಗಿ ಕುಲಭೂಷಣ್ ಅವರನ್ನು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದವಾಗಿದೆ.
Comments are closed.