ಕರ್ನಾಟಕ

ಸಂಕಷ್ಟದಲ್ಲಿ ಡಿಕೆ ಶಿವಕುಮಾರ್‌; ಸಮನ್ಸ್‌ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಜಾ: ಬಂಧನ ಭೀತಿ?

Pinterest LinkedIn Tumblr

ಬೆಂಗಳೂರು: ಹೊಸದಿಲ್ಲಿ, ಬೆಂಗಳೂರು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಸಮನ್ಸ್‌ಗೆ ತಡೆ ನೀಡಬೇಕೆಂದು ಕೋರಿ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಸೆಕ್ಷನ್ 120 ಬಿ ಜೊತೆ ಮತ್ತೊಂದು ಅಧಿಸೂಚಿತ ಕೇಸ್ ಇರಬೇಕೆಂದಿಲ್ಲ, 120 ಬಿಯನ್ನು ಒಳಸಂಚು ಎಂದು ಪ್ರತ್ಯೇಕ ವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

ಅಲ್ಲದೇ ಡಿಕೆ ಶಿವಕುಮಾರ್‌, ಸಚಿನ್‌ ನಾರಾಯಣ್‌ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ನ್ಯಾಯಪೀಠ ವಜಾಗೊಳಿಸಿದೆ.

ಇದರೊಂದಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಸಿರು ನಿಶಾನೆ ದೊರೆತಂತಾಗಿದೆ. ಈಗ ಡಿಕೆ ಶಿವಕುಮಾರ್‌ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌ ಆಗಿದ್ದ ಡಿಕೆ ಶಿವಕುಮಾರ್‌ಗೆ ಈಗ ಜಾರಿ ನಿರ್ದೇಶನಾಲಯದ ಟ್ರಬಲ್‌ ಆರಂಭವಾಗಿದೆ.

ಸಮನ್ಸ್‌ಗೆ ತಡೆ ನಿರಾಕರಣೆಯಾಗಿದ್ದರಿಂದ ಡಿಕೆ ಶಿವಕುಮಾರ್‌ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬೇಕಾಗಿದೆ.

ಡಿಕೆ ಶಿವಕುಮಾರ್‌ ಅವರ ನಿವಾಸ, ಕಚೇರಿಗಳ ಮೇಲೆ ಆಗಸ್ಟ್‌ 1, 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಡಿಕೆಶಿಗೆ ಸೇರಿದ್ದ ಒಟ್ಟು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಹೊಸದಿಲ್ಲಿಯ ಡಿಕೆಶಿ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 8.9 ಕೋಟಿ ರೂ. ನಗದು ಪತ್ತೆಯಾಗಿತ್ತು.

ಒಟ್ಟಾರೆಯಾಗಿ ಡಿಕೆಶಿ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದಾಗ 300 ಕೋಟಿ ರೂ. ಗಳಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿದ್ದವು.

Comments are closed.