
ನವದೆಹಲಿ: ಟ್ಯಾಕ್ಸಿ ಡ್ರೈವರ್-2(ದಕ್ಷಿಣ ಕೊರಿಯಾ ಮೂಲ) ಹೆಸರಿನ ಮೊಬೈಲ್ ಗೇಮ್ನಿಂದ ಪ್ರಭಾವಿತಳಾದ 15 ವರ್ಷದ ಬಾಲಕಿಯೊಬ್ಬಳು ಉತ್ತರಾಖಂಡದ ಉಧಮ್ಸಿಂಗ್ ನಗರ ಜಿಲ್ಲೆಯ ತನ್ನ ಮನೆಯಿಂದ ನಾಪತ್ತೆಯಾದ ಬಳಿಕ 18 ದಿನದಲ್ಲಿ ದೇಶದ 10 ನಗರಗಳನ್ನು ಸುತ್ತಿದ್ದಾಳೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ದೆಹಲಿಯ ಕಮಲ್ ಮಾರುಕಟ್ಟೆ ಪ್ರದೇಶದಲ್ಲಿ ರಿಕ್ಷಾ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಬಾಲಕಿಯನ್ನು ದೆಹಲಿ ಪೊಲೀಸರು ನೋಡಿದ್ದಾರೆ. ಬಳಿಕ ಆಕೆಯನ್ನು ವಶಕ್ಕೆ ಪಡೆದುಕೊಂಡು ಉಧಮ್ಸಿಂಗ್ ನಗರ ಪೊಲೀಸ್ರನ್ನು ಸಂಪರ್ಕಿಸಿ ಅಕೆಯನ್ನು ಶುಕ್ರವಾರ ಬೆಳಗ್ಗೆ ಪಂತ್ ನಗರಕ್ಕೆ ಕರೆತರಲಾಗಿದೆ.
ಉಧಮ್ಸಿಂಗ್ ನಗರ ಜಿಲ್ಲೆಯ ಪಂತ್ ನಗರದಲ್ಲಿನ ತನ್ನ ಮನೆಯಿಂದ ಜುಲೈ 1ರಿಂದ ಬಾಲಕಿ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಕೊನೆಯದಾಗಿ ಆಕೆಯನ್ನು ದೆಹಲಿಯ ಕಮಲ್ ಮಾರುಕಟ್ಟೆ ಪ್ರದೇಶದಲ್ಲಿ ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಉಧಮ್ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಆಕೆಯನ್ನು ಮನೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ತನ್ನ ತಾಯಿಯ ಮೊಬೈಲ್ನಲ್ಲಿ ಆಡುತ್ತಿದ್ದ ಟ್ಯಾಕ್ಸಿ ಡ್ರೈವರ್-2 ಗೇಮ್ನ ಪ್ರಭಾವದಿಂದ ಹೀಗಾಗಿದೆ ಎಂದು ಹೇಳಲಾಗಿದೆ.
ಬೇಸಿಗೆಯ ಸಮಯದಲ್ಲಿ ನನ್ನ ತಾಯಿಯ ಮೊಬೈಲ್ನಿಂದ ಗೇಮ್ ಡೌನ್ಲೋಡ್ ಮಾಡಿಕೊಂಡೆ. ಬಳಿಕ ಗೇಮ್ನಲ್ಲಿ ಸಂಪೂರ್ಣ ತೊಡಗಿಕೊಂಡು ಎಲ್ಲ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದೆ. ಗೇಮ್ನಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಟ್ಯಾಕ್ಸಿ ಡ್ರೈವರ್ ಪಾತ್ರವನ್ನು ನಿಜ ಜೀವನದಲ್ಲಿ ಮಾಡಬೇಕೆಂದು ನಿರ್ಧಾರ ಮಾಡಿದೆ ಎಂದು ತನಿಖಾಧಿಕಾರಿ ಹಾಗೂ ಸಬ್ಇನ್ಸ್ಪೆಕ್ಟರ್ ವಿಪುಲ್ ಜೋಶಿ ನಡೆಸಿದ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.
ಗೇಮ್ನಲ್ಲಿ ವಿವಿಧ ಪ್ರದೇಶಗಳಿಂದ ಪ್ರಯಾಣಿಕರನ್ನು ಪಿಕ್ಅಪ್ ಮಾಡುವ ಟ್ಯಾಕ್ಸಿ ಡ್ರೈವರ್ ತನ್ನ ದಾರಿಯಲ್ಲಿ ಅಡೆತಡೆಗಳನ್ನು ದಾಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುತ್ತಾನೆ. ಅದೇ ರೀತಿಯಾಗಿ ಒಂದು ದಿನವು ಎಲ್ಲಿಯೂ ಉಳಿದುಕೊಳ್ಳದೇ ದೇಶದ ವಿವಿಧ ನಗರಗಳಿಗೆ ಭೇಟಿ ನೀಡಲು ಬಾಲಕಿ ತೀರ್ಮಾನಿಸಿ ಜುಲೈ 1ರಂದು ಮನೆ ಬಿಟ್ಟಿದ್ದಳು ಎಂದು ಜೋಶಿ ತಿಳಿಸಿದ್ದಾರೆ.
ಬಾಲಕಿಯ ಯೋಜನೆಯಂತೆ ಮನೆ ಬಿಡುವ ವೇಳೆ ಸುಮಾರು 12,000 ರೂ. ಹಣ್ಣವನ್ನು ಕಳ್ಳತನ ಮಾಡಿಕೊಂಡು ಉತ್ತರಾಖಂಡದ ಕಿಚ್ಚ ಟೌನ್ನಿಂದ ಉತ್ತರ ಪ್ರದೇಶದ ಬರೇಲಿಗೆ ಬಸ್ ಏರಿದ್ದಳು. ಬಳಿಕ ಲಖನೌಗೆ ತೆರಳಿ, ಅಲ್ಲಿಂದ ರಾಜಸ್ಥಾನದ ಜೈಪುರಕ್ಕೆ ಬಂದಿಳಿದಿದ್ದಳು. ನಂತರ ಉದಯ್ಪುರ, ಜೋಧ್ಪುರ, ಅಹಮದಬಾದ್ ಮತ್ತು ಪುಣೆ ನಗರಗಳಲ್ಲಿ ಬಾಲಕಿ ಸುತ್ತಾಡಿದ್ದಾಳೆ. ಬಳಿಕ ಪುಣೆಯಿಂದ ವಾಪಸ್ ಜೈಪುರಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಹೋಗಿ ಅಲ್ಲಿಂದ ರಿಶಿಕೇಶ್ ತೆರಳಿ ಮತ್ತೆ ದೆಹಲಿಗೆ ಹೋಗಿದ್ದಾಳೆ. ಮತ್ತೆ ರಿಶಿಕೇಶ್ ಹಾಗೂ ಹರಿದ್ವಾರಕ್ಕೆ ತೆರಳಿ ಮತ್ತೆ ದೆಹಲಿಗೆ ಬಂದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
18 ದಿನಗಳ ಪ್ರಯಾಣದಲ್ಲಿ ಆಕೆಯ ಬಳಿ ಗುರುತಿನ ಚೀಟಿ ಇಲ್ಲದ ಕಾರಣ ಆಕೆಗೆ ಎಲ್ಲಿಯೂ ಹೋಟೆಲ್ ಸಿಕ್ಕಿಲ್ಲ. ಹೀಗಾಗಿ ರಾತ್ರಿಯ ವೇಳೆ ಮಲಗಲು ಆಕೆ ಬೋರ್ಡಿಂಗ್ ಬಸ್ನಲ್ಲಿಯೇ ಪ್ರಯಾಣ ಮಾಡಿದ್ದಾಳೆ. 18 ದಿನಗಳ ಕಾಲ ಚಿಪ್ಸ್, ಬಿಸ್ಕೆಟ್ ಹಾಗೂ ನೀರು ಕುಡಿದು ಬದುಕಿದ್ದಾಳೆ. ಅಷ್ಟು ದಿನಗಳ ಕಾಲ ಆಕೆ ಸ್ನಾನವನ್ನೂ ಮಾಡಿಲ್ಲ.
ಪಾಲಕರ ದೂರಿನ ಅನ್ವಯ ಬಾಲಕಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಜೈಪುರದಲ್ಲಿ ಬಸ್ ಟಿಕೆಟ್ ಬುಕ್ ಮಾಡಲು ತನ್ನ ಸಹೋದರನ ಇಮೇಲ್ ಐ.ಡಿ.ಯನ್ನು ನೀಡಿದಾಗ ಆಕೆಯ ಜಾಡನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ, ಅಲ್ಲಿಗೆ ಹೋಗುವಷ್ಟರಲ್ಲಿ ಆಕೆ ಅಲ್ಲಿರಲಿಲ್ಲ. ಕೊನೆಗೆ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದು, ಕೊನೆಗೂ ಪ್ರಕರಣ ಸುಖಾಂತ್ಯ ಕಂಡಿದೆ.
Comments are closed.