
ಭುವನೇಶ್ವರ: ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬುಡಕಟ್ಟು ಸಮುದಾಯದ ಯುವತಿಯನ್ನು ಮೂವರು ಸಹಪಾಠಿಗಳು ಸೇರಿದಂತೆ ಐವರು ಯುವಕರು ಬಲವಂತವಾಗಿ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಐವರು ಆರೋಪಿಗಳಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಓಡಿಶಾದ ಸುಂದರಗರ್ ಪಟ್ಟಣದ ಮಾಡೆಲ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ಸೋಮವಾರ ಸಂಜೆ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಯುವತಿಯ ಮೂವರು ಸಹಪಾಠಿಗಳು ಮತ್ತು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆ ಜೂನ್ 26ರಂದೇ ನಡೆದಿದ್ದರೂ ವಿಷಯ ಹೊರಗೆ ಬಾಯಿ ಬಿಡದಂತೆ ಆರೋಪಿಗಳು ಯುವತಿಗೆ ಜೀವ ಬೆದರಿಕೆ ಒಡ್ಡಿದ್ದರು. ಹೀಗಾಗಿ ಯುವತಿ ಹೆದರಿಕೆಯಿಂದ ಈ ವಿಷಯವನ್ನು ಯಾರಿಗೂ ತಿಳಿಸಿದೆ ಮುಚ್ಚಿಟ್ಟಿದ್ದರು. ಬಳಿಕ ಯುವತಿ ಧೈರ್ಯ ಮಾಡಿ, ಅತ್ಯಾಚಾರ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದು, ಐದನೇ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸುಂದರ್ಗರ್ ಎಸ್ಪಿ ಸೌಮ್ಯಾ ಮಿಶ್ರಾ ತಿಳಿಸಿದ್ದಾರೆ.
ಮೊದಲ ವರ್ಷದ ಪದವಿ ಓದುತ್ತಿರುವ ಯುವತಿ, ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಕಳೆದ ಎರಡು ವರ್ಷಗಳ ಹಿಂದೆಯೇ ಅಸುನೀಗಿದ್ದರು. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಯುವತಿ ಜೂನ್ 26ರಿಂದ ಕಾಲೇಜಿಗೂ ತೆರಳದೆ ಮನೆಯಲ್ಲೇ ಇದ್ದರು ಎಂದು ಯುವತಿಯ ತಾಯಿ ದುಃಖ ತೋಡಿಕೊಂಡಿದ್ದಾರೆ.
Comments are closed.