ರಾಷ್ಟ್ರೀಯ

ಕೇರಳದಲ್ಲಿ ರಾಹುಲ್ ಜಯಗಳಿಸಿದಾಗ ಭಾರತ ಸೋತಿತೇ?; ಕಾಂಗ್ರೆಸ್​ನ ಇವಿಎಂ ಅಪಸ್ವರಕ್ಕೆ ಮೋದಿ ತಿರುಗೇಟು

Pinterest LinkedIn Tumblr


ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ವಿಪಕ್ಷಗಳು ಎತ್ತಿರುವ ಅಪಸ್ವರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದರು. ರಾಜ್ಯಸಭೆಯ ಕಲಾಪದ ವೇಳೆಯೂ ವಿಪಕ್ಷಗಳು ಇವಿಎಂ ವಿಚಾರವನ್ನಿಟ್ಟುಕೊಂಡು ಪ್ರತಿಭಟನೆ ಮೂಲಕ ಕಲಾಪಕ್ಕೆ ಅಡ್ಡಿ ಉಂಟು ಮಾಡಿದರು. ಈ ವೇಳೆ, ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ವಿಪಕ್ಷಗಳ ಧೋರಣೆಯನ್ನು ಪ್ರಶ್ನಿಸಿದರು. ಇವಿಎಂ ಅನ್ನು ವಿರೋಧಿಸಿ, ಆದರೆ ರಾಜ್ಯಸಭೆಯ ಕಲಾಪಕ್ಕೆ ಅಡಚಣೆ ಮಾಡಬೇಡಿ ಎಂದು ವಿಪಕ್ಷಗಳಿಗೆ ತಿಳಿಹೇಳಿದರು.

“ಏನೂ ಇಲ್ಲದ ಸ್ಥಿತಿಯಲ್ಲಿದ್ದ ನಮ್ಮ ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದೇವೆ. ನಾವು ಚುನಾವಣೆಗಳನ್ನು ಸೋತಿದ್ದರೂ ಯಾವತ್ತೂ ಕೂಡ ನೆವಗಳನ್ನು ಹೇಳಿಲ್ಲ. ಯಾವಾಗ ಆತ್ಮವಿಶ್ವಾಸ ಇರುವುದಿಲ್ಲವೋ ಆವಾಗ ಜನರು ಆತ್ಮಾವಲೋಕನದ ಬದಲು ನೆವಗಳನ್ನ ಹುಡುಕಲು ಶುರು ಮಾಡುತ್ತಾರೆ. ಇದು ನಾಯಕತ್ವದ ಪರೀಕ್ಷೆಯಾಗಿದೆ. ಕಾರ್ಯಕರ್ತರ ಉತ್ಸಾಹ ಕುಂದಿಸುವುದರಿಂದ ಏನೂ ಪ್ರಯೋಜನವಿಲ್ಲ. ಅವರನ್ನು ಹುರಿದುಂಬಿಸಿ ಮುಂದಿನ ಯುದ್ಧಕ್ಕೆ ಅಣಿಗೊಳಿಸಿ” ಎಂದು ವಿಪಕ್ಷಗಳ ಮುಖಂಡರಿಗೆ ಪ್ರಧಾನಿ ಮೋದಿ ಕರೆ ಕೊಟ್ಟರು.

ಬಿಜೆಪಿ ನೇತೃತ್ವದ ಎನ್​ಡಿಎ-2 ಸರ್ಕಾರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಯ್​ಬರೇಲಿಯಲ್ಲಿ ಮಾತನಾಡುತ್ತಾ, ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎಂದು ಹೇಳುವ ಮೂಲಕ ಇವಿಎಂ ಮೇಲಿನ ಆರೋಪವನ್ನು ಸಮರ್ಥಿಸಿಕೊಂಡಿದ್ದರು. ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರೂ ಕೂಡ ಇವಿಎಂ ಬಗ್ಗೆ ಸಂದೇಹ ವ್ಯಕ್ತಪಡಿಸಿ ಬ್ಯಾಲಟ್ ಪೇಪರ್ ಬಳಕೆಯಾಗಬೇಕೆಂದು ಅಭಿಪ್ರಾಯಪಟ್ಟಿದ್ದರು. ಕಳೆದ ವಾರದಂದು ತಮಿಳುನಾಡಿನ ಕಾಂಗ್ರೆಸ್ ಮುಖಂಡರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ನರೇಂದ್ರ ಮೋದಿ ಚುನಾವಣೆ ಗೆದ್ದರಾದರೂ ಭಾರತ ಸೋತಿತು” ಎಂದು ವ್ಯಂಗ್ಯ ಮಾಡಿದ್ದರು.

ಈ ಹೇಳಿಕೆಯನ್ನು ಪ್ರಧಾನಿ ಅವರು ರಾಜ್ಯಸಭೆಯಲ್ಲಿನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳಿಗೆ ಚಾಟಿ ಬೀಸಿದರು. “ಹಾಗಾದರೆ ವಯನಾಡ್​ನಲ್ಲಿ ಅಥವಾ ರಾಯಬರೇಲಿಯಲ್ಲಿ ಭಾರತ ಸೋತಂತಾಯಿತೆ? ಕಾಂಗ್ರೆಸ್ ಸೋತರೆ ಭಾರತ ಸೋತಂತೆಯೇ? ಕಾಂಗ್ರೆಸ್ ಎಂದರೆ ಭಾರತ ಎಂದರ್ಥವೇ? ಇಂಥ ಹುಚ್ಚುತನಗಳಿಗೆ ಎಲ್ಲೆಯೇ ಇಲ್ಲ. ನೀವು ದೇಶದ ಮತದಾರರನ್ನು ಅವಮಾನಿಸುತ್ತಿದ್ದೀರಿ. ಇದು ನನಗೆ ತುಂಬಾ ನೋವು ತರುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಹಾಗೆಯೇ ಸೋಲನ್ನೂ ಒಪ್ಪಿಕೊಳ್ಳಲು ಆಗುತ್ತಿಲ್ಲ” ಎಂದು ನರೇಂದ್ರ ಮೋದಿ ಕುಟುಕಿದರು.

ಇವಿಎಂ ಬಳಕೆಯ ಕಾನೂನನ್ನು ಮೊದಲು ರೂಪಿಸಿದ್ದೇ ಕಾಂಗ್ರೆಸ್ ಸರ್ಕಾರ. ಅಲ್ಲಿಂದೀಚೆ 113 ವಿಧಾನಸಭಾ ಚುನಾವಣೆಗಳು ಹಾಗೂ 4 ಲೋಕಸಭಾ ಚುನಾವಣೆಗಳನ್ನು ಇವಿಎಂ ಬಳಸಿಯೇ ನಡೆಸಲಾಗಿದೆ. ವಿವಿಧ ಪಕ್ಷಗಳು ಹಾಗೂ ವ್ಯಕ್ತಿಗಳು ವಿವಿಧ ಹಂತಗಳಲ್ಲಿ ಅಧಿಕಾರಕ್ಕೆ ಬಂದಿವೆ. ಇವಿಎಂ ಬಗ್ಗೆ ಇದ್ದ ಸಂಶಯ ನಿವಾರಿಸಲು ಚುನಾವಣಾ ಆಯೋಗವು ಹ್ಯಾಕತಾನ್ ಕೂಡ ನಡೆಸಿತ್ತು. ಆದರೆ ಯಾರೂ ಅಲ್ಲಿ ಬಂದು ಪರೀಕ್ಷಿಸುವ ಗೋಜಿಗೆ ಹೋಗಲಿಲ್ಲ ಎಂದು ವಿಪಕ್ಷ ನಾಯಕರನ್ನು ಮೋದಿ ಟೀಕಿಸಿದರು.

ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಕೇಂದ್ರ ಮಾಡುತ್ತಿರುವ ಪ್ರಯತ್ನಕ್ಕೆ ವಿಪಕ್ಷಗಳು ಅಡ್ಡಗಾಲು ಹಾಕುತ್ತಿವೆ ಎಂದೂ ಪ್ರಧಾನಿ ವಿಷಾದಿಸಿದರು. “ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಸ್ತಾವವನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸರಿಯಲ್ಲ. ಕನಿಷ್ಠಪಕ್ಷ ಅದರ ಬಗ್ಗೆ ಚರ್ಚೆಯನ್ನಾದರೂ ಮಾಡಿ. ಕೇಂದ್ರದಲ್ಲಿರುವ ಆಡಳಿತ ಪಕ್ಷವು ಈ ಚುನಾವಣೆಯಿಂದ ಲಾಭ ಗಳಿಸುತ್ತದೆ ಎಂಬ ಭಯ ನಿಮಗಿದ್ದಲ್ಲಿ ಈ ಬಾರಿಯ ಒಡಿಶಾ ಚುನಾವಣೆಯ ಫಲಿತಾಂಶವನ್ನು ಗಮನಿಸಿರಿ. ಅಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎರಡೂ ಚುನಾವಣೆ ಏಕಕಾಲದಲ್ಲಿ ನಡೆದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಡಿಗೆ ವೋಟ್ ಹಾಕಿದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ” ಎಂದು ಮೋದಿ ಹೇಳಿದರು.

ಎನ್​ಡಿಎ-2 ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭಾಷಣ ಇದಾಗಿದೆ. ರಾಜ್ಯಸಭೆಯ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ಮಂದಿಗೆ ಈ ದೇಶದ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಮೋದಿ ಗೇಲಿ ಮಾಡಿದರು.

Comments are closed.