
ಇಂದು (ಶುಕ್ರವಾರ) ದೇಶದಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಗೆಯಲ್ಲಿ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ರಕ್ಷಣಾ ಇಲಾಖೆಯ ನಾಯಿಗಳೂ ಸಹ ಇಂದು ಯೋಗ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದವು.
ನಾಯಿಗಳು ತಮ್ಮ ಟ್ರೈನರ್ಗಳು ಮಾಡಿದಂತೆ ಯೋಗದ ಭಂಗಿಗಳನ್ನು ಅನುಕರಿಸುವ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈರಲ್ ಆಗಿತ್ತು. ಆದರೆ, ಅದೇ ಪೋಟೋವನ್ನು ಇಂದು ಸಂಜೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅದಕ್ಕೆ ‘ಹೊಸ ಭಾರತ’ ಎಂಬ ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ.
ನಾಯಿಗಳು ಯೋಗ ಮಾಡುವ ಅಸಲಿ ಪೋಟೋವನ್ನು ಮೊದಲು ಟ್ವೀಟ್ ಮಾಡಿದವರು ರಕ್ಷಣಾ ಸಚಿವಾಲಯದ ವಕ್ತಾರ ಅಮನ್ ಆನಂದ್. “ಸೇನಾ ನಾಯಿಗಳ ತಂಡ ಯೋಗಾಭ್ಯಾಸ ಮಾಡುತ್ತಿವೆ” ಎಂಬ ಶೀರ್ಷಿಕೆಯಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋವನ್ನು ಹಂಚಿಕೊಂಡಿದ್ದರು.
ಅಸಲಿ ಪೋಸ್ಟ್ಗೆ 9,000 ಕ್ಕೂ ಅಧಿಕ ಲೈಕುಗಳು ಬಂದಿವೆ. ರಾಹುಲ್ ಗಾಂಧಿ ಈ ಪೋಟೋವನ್ನು ಟ್ವೀಟ್ ಮಾಡಿದ 30 ನಿಮಿಷಗಳಲ್ಲಿ 4,000 ಲೈಕುಗಳು ಬಂದಿವೆ. ಆದರೆ, ಈ ಪೋಟೋಗೆ ರಾಹುಲ್ ಗಾಂಧಿ ‘ಹೊಸ ಭಾರತ’ ಎಂಬ ಶೀರ್ಷಿಕೆಯನ್ನು ಏಕೆ ಕೊಟ್ಟರು? ಎಂಬುದು ಮಾತ್ರ ಈ ವರೆಗೆ ಯಾರಿಗೂ ಅರ್ಥವಾಗುತ್ತಿಲ್ಲ.
ಆದರೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕಳೆದ 3 ವರ್ಷಗಳಿಂದ ರಕ್ಷಣಾ ಇಲಾಖೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ರಫೇಲ್ ಹಗರಣದ ಕುರಿತು ನಿರಂತರವಾಗಿ ಹೋರಾಡುತ್ತಲೇ ಇದೆ. ಅಲ್ಲದೆ, ಈ ಹಗರಣದ ಕುರಿತು ರಕ್ಷಣಾ ಇಲಾಖೆಯೂ ಎಲ್ಲವೂ ತಿಳಿದಿದ್ದು ಮೌನವಾಗಿದೆ ಎಂದು ಈ ಹಿಂದೆಯೇ ರಾಹುಲ್ ಗಾಂಧಿ ಆರೋಪಿಸಿದ್ದರು.
ಇದೇ ಕಾರಣಕ್ಕೆ ರಾಹುಲ್ ತಮ್ಮ ಟ್ರೈನರ್ಗಳು ಹೇಳಿದ್ದನ್ನು ಚಾಚೂ ತಪ್ಪದೆ ಅನುಕರಿಸುವ ರಕ್ಷಣಾ ಇಲಾಖೆಯ ನಾಯಿಗಳ ಪೋಟೋವನ್ನು ಟ್ವೀಟಿಸುವ ಮೂಲಕ ರಫೇಲ್ ಹಗರಣದ ಕುರಿತು ಪರೋಕ್ಷವಾಗಿ ಗೇಲಿ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಠಾರದಲ್ಲಿ ಕೇಳಿಬರುತ್ತಿವೆ.
Comments are closed.