ರಾಷ್ಟ್ರೀಯ

ದಿಗ್ವಿಜಯ್ ಸಿಂಗ್ ರ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಟೀಕಿಸಲು ವೇದಿಕೆ ಏರಿದವನಿಂದ ಮೋದಿ ಗುಣಗಾನ

Pinterest LinkedIn Tumblr


ಭೋಪಾಲ್: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ನಾಯಕರು ಪರಸ್ಪರ ವಾಗ್ದಾಳಿ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಿರುವಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರನ್ನು ಪೇಚಿಗೀಡು ಮಾಡಿದ ಪ್ರಸಂಗ ನಡೆದಿದೆ.

ಚುನಾವಣಾ ಪ್ರಚಾರಕ್ಕಾಗಿ ಭೋಪಾಲ್ ನ ಬೈರಸಿಯಾ ತಲುಪಿದ್ದ ದಿಗ್ವಿಜಯ್ ಸಿಂಗ್ ವೇದಿಕೆ ಮೇಲೆ ನಿಂತು ಮೋದಿ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ. ಬಳಿಕ ನೆರೆದಿದ್ದ ಜನರ ಬಳಿ ನಿಮ್ಮ ಖಾತೆಗೆ 15 ಲಕ್ಷ ಬಂತೇ? ಎಂದು ಪ್ರಶ್ನಿಸಿದ್ದಾರೆ. ಇದೇ ಪ್ರಶ್ನೆಯನ್ನು ಮೂರ್ನಾಲ್ಕು ಬಾರಿ ಕೇಳಿದಾಗ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಯುವಕನೊಬ್ಬ ಕೈ ಮೇಲಕ್ಕೆತ್ತಿದ್ದಾನೆ. ಇದನ್ನು ಕಂಡ ದಿಗ್ವಿಜಯ್ ಸಿಂಗ್ ಆತನನ್ನು ಕೂಡಲೇ ವೇದಿಕೆಗೆ ಕರೆದಿದ್ದಾರೆ.

ಆದರೆ ವೇದಿಕೆಗೆ ಬಂದ ಯುವಕ ಸರ್ಜಿಕಲ್ ಸ್ಟ್ರೈಕ್ ವಿಚಾರವಾಗಿ ಮಾತನಾಡುತ್ತಾ ಪ್ರಧಾನಿ ಮೋದಿಯ ಗುಣಗಾನ ಆರಂಭಿಸಿದ್ದಾನೆ. ಇದನ್ನು ಕೇಳಿದ ದಿಗ್ವಿಜಯ್ ಸಿಂಗ್ ಮುಖ ಕಳೆಗಟ್ಟಿದೆ. ಮೈಕ್ ಹಿಡಿದ ಯುವಕ ‘ಮೋದೀಹಜಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಸದೆ ಬಡಿದಿದ್ದಾರೆ’ ಎಂದಿದ್ದಾನೆ. ಇಷ್ಟಾಗಿದ್ದೇ ತಡ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಒತ್ತಾಯಪೂರ್ವಕವಾಗಿ ವೇದಿಕೆಯಿಂದ ಕೆಳಗಿಳಿಸಿದ್ದಾರೆ.

Comments are closed.