ರಾಷ್ಟ್ರೀಯ

ಮೇಲ್ಜಾತಿಗೆ ಮೀಸಲಾತಿ: ಮದ್ರಾಸ್​​ ಹೈಕೋರ್ಟ್​​ ಮೆಟ್ಟಿಲೇರಿದ ಡಿಎಂಕೆ!

Pinterest LinkedIn Tumblr


ನವದೆಹಲಿ: ಮೇಲ್ಜಾತಿಗೆ ಶೇ.10 ಮೀಸಲಾತಿ ನೀಡುವುದನ್ನು ಪ್ರಶ್ನಿಸಿ ಸ್ಟಾಲಿನ್​​ ನೇತೃತ್ವದ ಡಿಎಂಕೆ ಪಕ್ಷ ಮದ್ರಾಸ್​​ ಹೈಕೋರ್ಟ್​​ ಮೆಟ್ಟಿಲೇರಿದೆ. ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೇಲ್ವರ್ಗದ ಬಡವರಿಗೆ ಮೀಸಲಾತಿ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿಗೆ ಮುಂದಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರಿಗೆ ಮಾತ್ರ ಮೀಸಲಾತಿ ನೀಡಬೇಕೆ ಹೊರತು, ಆರ್ಥಿಕ ಆಧಾರದ ಮೇಲಲ್ಲ. ಹೀಗಾಗಿ ಈ ನೀತಿಯನ್ನು ಪರಿಗಣಿಸದೇ ಕೂಡಲೇ ಕೇಂದ್ರದ ಸಂವಿಧಾನ ತಿದ್ದುಪಡಿ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ನ್ಯಾಯಲಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರ ಸದ್ಯದ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 60 ಮಾಡಲು ಹೊರಟಿದೆ. ಪ್ರಸ್ತುತ ತಮಿಳುನಾಡಿನಲ್ಲಿ ಮೀಸಲಾತಿಯ ಪ್ರಮಾಣ ಈಗಾಗಲೇ ಶೇ.69ರಷ್ಟಿದೆ. ಕೇಂದ್ರದ ಹೊಸ ಮಸೂದೆಯಿಂದಾಗಿ ಮೀಸಲಾತಿ ಪ್ರಮಾಣ ಶೇ.79ಕ್ಕೆ ಹೆಚ್ಚಲಿದೆ. ಇದು ದೇಶದ ಸಂವಿಧಾನಕ್ಕೆ ವಿರುದ್ಧ. ಹೀಗಾಗಿ ಕೇಂದ್ರ ಸಂವಿಧಾನ ತಿದ್ದುಪಡಿ ನಿರ್ಧಾರಕ್ಕೆ ತಡೆಯಾಜ್ಞೆ ನೀಡಬೇಕು. ಹಾಗೆಯೇ ಈ ಮಸೂದೆ ಜಾರಿಗೆ ನಿರ್ಧಾರ ತೆಗೆದುಕೊಂಡಿರುವ ಕೇಂದ್ರದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.

ವಾರ್ಷಿಕ ಆದಾಯ 8 ಲಕ್ಷ ರೂ.ವರೆಗೆ ಹೊಂದಿರುವ ಮೇಲ್ವರ್ಗದರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕಲ್ಪಿಸಲು ಕೇಂದ್ರ ಮುಂದಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲಿಯೇ ಈ ನಿರ್ಧಾರ ತೆಗೆದುಕೊಂಡಿರುವುದು ಅನುಮಾನಕ್ಕೀಡು ಮಾಡಿದೆ. ಪ್ರಧಾನಿ ಮೋದಿ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ. ಅಲ್ಲದೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಯೂ ಮಸೂದೆಗೆ ಅನುಮೋದನೆ ಸಿಕ್ಕಿದೆ. ಮತದಾರರನ್ನು ಸೆಳೆಯುವ ಸಲುವಾಗಿಯೇ ಕೇಂದ್ರ ಸೇರಿದಂತೆ ವಿಪಕ್ಷಗಳು ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿ ವಿಧೇಯಕದ ವಿರುದ್ಧ ಯೂತ್‌ ಫಾರ್‌ ಈಕ್ವಾಲಿಟಿ ಸಂಸ್ಥೆ ಸುಪ್ರೀಂಕೋರ್ಟ್​​ನಲ್ಲಿ ತಕಾರಾರು ಅರ್ಜಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ಆದೇಶ ಅನುಸಾರ ಮೀಸಲು ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗುವಂತಿಲ್ಲ ಎಂದು ಹೇಳಿದೆ. ಆದರೆ ಸದ್ಯ ಕೇಂದ್ರ ತರಲೊರಟಿರುವ ಮೇಲ್ಜಾತಿ ಮೀಸಲು ವಿಧೇಯಕ ಜಾರಿಯಾದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಸದ್ಯದಲ್ಲೇ ಮೇಲ್ಜಾತಿಯವರ ಮೀಸಲು ವಿಧೇಯಕ ರಾಷ್ಟ್ರಪತಿ ಅಂಗಳಕ್ಕೆ ತಲುಪಿದೆ. ಬಳಿಕ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ಕೂಡಲೇ ಸರ್ಕಾರ ಗೆಜೆಟಿಯರ್​ನಲ್ಲಿ ಪ್ರಕಟಿಸಲು ಸಜ್ಜಾಗಿದೆ ಎಂದು ವಕೀಲರು ವಾದಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ಕುರಿತಾದ ಕೇಂದ್ರದ ಸಾಂವಿಧಾನಿಕ ಮಸೂದೆ ಪರ-ವಿರೋಧ ಚರ್ಚೆಗಳ ನಡೆದವು. ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿಯೂ ಮಸೂದೆಗೆ ಅನುಮೋದನೆ ಸಿಕ್ಕಿತು. ಮಂಗಳವಾರ ಮಧ್ಯಾಹ್ನದ ವೇಳೆ ಕೇಂದ್ರ ಸರ್ಕಾರ ಮಸೂದೆಯನ್ನು ಲೋಕಸಭೆಯ ಮುಂದಿರಿಸಿತ್ತು. ಮುಸ್ಲಿಮೇತರ ವಲಸೆಗಾರರಿಗಾಗಿ ಭಾರತೀಯ ಪೌರತ್ವ ಮಸೂದೆಯ ಚರ್ಚೆಯ ನಂತರ ಮೀಸಲಾತಿ ಮಸೂದೆ ಚರ್ಚೆ ಪ್ರಾರಂಭವಾಯ್ತು. ಮಸೂದೆಯ ವಿರುದ್ಧವಾಗಿ ಸಂಸತ್​​ನಲ್ಲಿ ಕೇವಲ ಮೂವರು ಸಂಸದರು ಮಾತ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ 323 ಸಂಸದರು ಅಗ್ರಗಣ್ಯ ಜಾತಿಗಳಿಗೆ ಮೀಸಲಾತಿ ನೀಡುವ ಮಸೂದೆ ಪರವಾಗಿ ಮತ ಚಲಾಯಿಸಿದ್ದು, ಲೋಕಸಭೆಯಲ್ಲಿ ಬಿಲ್​ಗೆ​​ ಅಸ್ತು ಸಿಕ್ಕಿದೆ.

Comments are closed.