ಕರ್ನಾಟಕ

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಸೇರಿ 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

Pinterest LinkedIn Tumblr

ಬೆಂಗಳೂರು: ಕೊನೆಗೂ ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರದ ಸಂಪುಟ ಶನಿವಾರ ವಿಸ್ತರಣೆಯಾಗಿದ್ದು, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ.ಪಾಟೀಲ್ ಸೇರಿದಂತೆ ಎಂಟು ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಂದು ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರು ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ವಿಧಾನ ಪರಿಷತ್ ಸದಸ್ಯ ಆರ್​.ಬಿ. ತಿಮ್ಮಾಪುರ, ಶಾಸಕ ಸತೀಶ್​ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್​. ಶಿವಳ್ಳಿ ಪ್ರಮಾಣ ವಚನ ಸ್ವೀಕರಿಸಿದರು.

ಐದನೆಯವರಾಗಿ ಪಿ.ಟಿ. ಪರಮೇಶ್ವರ್​ನಾಯ್ಕ್​ ಅವರು ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್​ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್​ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ, ಸಂಸದ ವೀರಪ್ಪ ಮೊಯ್ಲಿ, ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ನೂತನ ಸಚಿವರ ಸಂಭವನೀಯ ಖಾತೆಗಳ ಪಟ್ಟಿ

ಎಂ.ಬಿ.ಪಾಟೀಲ್ – ಗೃಹ/ ಗ್ರಾಮೀಣಾಭಿವೃದ್ಧಿ
ಎಂ.ಟಿ.ಬಿ. ನಾಗರಾಜ್ – ನಗರಾಭಿವೃದ್ಧಿ ಖಾತೆ
ಸತೀಶ್ ಜಾರಕಿಹೊಳಿ – ಅರಣ್ಯ/ ಪೌರಾಡಳಿತ
ರಹೀಂಖಾನ್ – ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ
ಪರಮೇಶ್ವರ ನಾಯ್ಕ್​​ – ಮೂಲಸೌಕರ್ಯ ಮತ್ತು ಕೌಶಲಾಭಿವೃದ್ಧಿ
ಆರ್.​ಬಿ. ತಿಮ್ಮಾಪುರ – ವೈದ್ಯಕೀಯ ಶಿಕ್ಷಣ
ತುಕಾರಾಂ – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

Comments are closed.