ರಾಷ್ಟ್ರೀಯ

1 ವರ್ಷದಲ್ಲಿ 25 ಸ್ಥಳಗಳ ಹೆಸರು ಬದಲಿಸಿದ ಕೇಂದ್ರ

Pinterest LinkedIn Tumblr


ನವದೆಹಲಿ: ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶದ 25 ಪಟ್ಟಣ ಮತ್ತು ಹಳ್ಳಿಗಳ ಹೆಸರನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳದ ಹೆಸರು ಬದಲಾವಣೆ ಯತ್ನವೂ ನಡೆದಿದ್ದು, ಸದ್ಯ ಆ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಹೆಸರು ಬದಲಾವಣೆಗಳ ನಗರಗಳ ಪಟ್ಟಿಗೆ ಹೆಚ್ಚುವರಿಯಾಗಿ ನೂತನವಾಗಿ ಅಲಹಾಬಾದ್ ಮತ್ತು ಫೈಜಾಬಾದ್ ನಗರಗಳು ಸೇರಿವೆ.

ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂಬುದಾಗಿ ಸೇರಿದಂತೆ ನಗರಗಳ ಹೆಸರು ಬದಲಾವಣೆಗೆ ಹಲವು ಪ್ರಸ್ತಾವನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಈ ಕಾರ್ಯದಲ್ಲಿ ಹಲವು ಇಲಾಖೆಗಳ ಸಚಿವರು ಭಾಗಿಯಾಗಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ಭಾಗಗಳ 25 ಪಟ್ಟಣ ಮತ್ತು ಹಳ್ಳಿಗಳ ಹೆಸರು ಬದಲಾವಣೆಗೆ ಅನುಮತಿ ನೀಡಿದೆ ಎಂದು ಸಚಿವಾಲಯದ ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

ಅಲಹಾಬಾದ್ ನಗರವನ್ನು ಪ್ರಯಾಗ್​ರಾಜ್​ ಎಂಬುದಾಗಿ ಮತ್ತು ಫೈಜಾಬಾದ್ ನಗರವನ್ನು ಆಯೋಧ್ಯಾ ಎಂಬುದಾಗಿ ಹೆಸರು ಬದಲಿಸುವಂತೆ ಉತ್ತರಪ್ರದೇಶ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಹೆಸರು ಬದಲಾವಣೆಗೊಂಡ ನಗರಗಳ ಪಟ್ಟಿ ಹೀಗಿವೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮುಂಡ್ರಿ ನಗರ ರಾಜಮಹೇಂದ್ರವರ್ಮಾ ನಗರವಾಗಿ ಹೆಸರು ಬದಲಾವಣೆಗೊಂಡಿದೆ. ಓಡಿಶಾದ ಭಾದ್ರಾಕ್​ ಜಿಲ್ಲೆಯ ಔಟರ್​ ವೀಲ್ಹರ್​ ನಗರ ಎಪಿಜಿ ಅಬ್ದುಲ್ ಕಲಾಂ ದ್ವೀಪ ಎಂಬುದಾಗಿ ಅಂಕಿತ ಬದಲಾವಣೆ ಮಾಡಲಾಗಿದೆ. ಕೇರಳದ ಮಾಲಪ್ಪುರ ಜಿಲ್ಲೆಯ ಅರಿಕ್ಕೋಡ್ ನಗರವು ಅರಿಕೋಡೆ ಎಂಬುದಾಗಿ ಹಾಗೂ ಹರ್ಯಾಣ ರಾಜ್ಯದ ಜಿಂದ್​ ಜಿಲ್ಲೆಯ ಪಿಂಡಾರಿ ನಗರವೂ ಪಾಂಡು-ಪಿಂಡಾರ ಎಂಬುದಾಗಿ ಮತ್ತು ನಾಗಾಲ್ಯಾಂಡ್​ನ ಕಿಪೈರೆ ಜಿಲ್ಲೆಯ ಸಾಂಪುರ್​ ನಗರವನ್ನು ಸಾಮ್​ಪುರಿ ಎಂದು ಹೆಸರು ಬದಲು ಮಾಡಲಾಗಿದೆ.

ಸಚಿವಾಲಯವೂ ಇತರೆ ಕೆಲವು ನಗರಗಳ ಮರುನಾಮಕರಣ ಪ್ರಸ್ತವಾನೆಗೆ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲ್ಯಾಂಡ್ಗಿವಾಡಿಯನ್ನು ನರಸಿಂಗಾನ್​, ಹರ್ಯಾಣದ ರೋಹ್ಟಕ್​ ಜಿಲ್ಲೆಯ ಗಾರ್ಹಿ ಸಂಪ್ಲಾ ನಗರ ಸರ್​ ಛೋಟಾ ರಾಮ್​ ನಗರ, ರಾಜಸ್ಥಾನದ ನಾಗ್ವೋರ್ ಜಿಲ್ಲೆಯ ಖಟು ಕಲಾನ್ ಹಳ್ಳಿಯನ್ನು ಬರಿ ಖಟು, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮಿಹಗ್ವಾನ್ ಚಕ್ಕಾ ಮತ್ತು ಮಿಹಗ್ವಾನ್ ತಿಲೈ ಹಳ್ಳಿಗಳನ್ನು ಮಿಹಗ್ವಾನ್ ಸರ್ಕಾರ್ ಮತ್ತು ಮಿಹಗ್ವಾನ್ ಘಾಟ್ ಎಂದು ಮರುನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಶುಕ್ರತಾಲ್ ಖಾದರ್​ ಅನ್ನು ಶುಕ್ರಿತ್ ಖಾದರ್ ಎಂಬುದಾಗಿ, ಶುಕ್ರತಾಲ್ ಬಂಗಾರ್​ಅನ್ನು ಶುಕ್ರಿತ್ ಬಂಗಾರ್ ಎಂದು ಹೆಸರು ಬದಲಿಸಲಾಗಿದೆ.

ಆದಾಗ್ಯೂ, ನಾಗಾಲ್ಯಾಂಡ್​ನ ದಿಮಾಪುರ್ ಜಿಲ್ಲೆಯ ಕಚಾರಿಗಾನ್​ಅನ್ನು ಫೆವಿಮಾ ಎಂದು ಹೆಸರು ಬದಲಿಸುವ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವಾಲಯ ನಗರಗಳ ಹೆಸರು ಬದಲಾವಣೆ ಮಾಡಿದ ನಂತರ ರೈಲ್ವೆ ಇಲಾಖೆ ಮತ್ತು ಅಂಚೆ ಮತ್ತು ಸರ್ವೇ ಇಲಾಖೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ. ಪ್ರಸ್ತಾವಿತ ನಗರ ಮತ್ತು ಹಳ್ಳಿಗಳ ಹೆಸರು ಇಲಾಖೆ ದಾಖಲೆಯಲ್ಲಿ ಇಲ್ಲ ಎಂದು ಈ ಇಲಾಖೆಗಳು ದೃಢಪಡಿಸಿವೆ.

ಯಾವುದೇ ರಾಜ್ಯದ ಹೆಸರನ್ನು ಬದಲಿಸಲು ಸಂವಿಧಾನ ತಿದ್ದುಪಡಿಯಲ್ಲಿ ಸುಲಭ ವಿಧಾನ ಕ್ರಮಗಳಿವೆ. ಆದರೆ, ಹಳ್ಳಿ ಮತ್ತು ಪಟ್ಟಣಗಳ ಹೆಸರನ್ನು ಬದಲಿಸಲು ಹಲವು ಆದೇಶಗಳ ಅವಶ್ಯಕತೆ ಇದೆ.

ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸಲು ರಾಜ್ಯ ಸರ್ಕಾರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಗೃಹ ಸಚಿವಾಲಯ ವಿದೇಶಾಂಗ ಸಚಿವಾಲಯದ ಅಭಿಪ್ರಾಯ ಕೇಳಿದೆ. ಏಕೆಂದರೆ ಭಾರತ ಪಕ್ಕದಲ್ಲಿಯೇ ಬಾಂಗ್ಲಾದೇಶ ಎಂಬ ಹೆಸರಿನ ದೇಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಗುರುವಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಅಹಮದಾಬಾದ್ ನಗರವನ್ನು ಕರ್ಣಾವತಿ ಎಂಬುದಾಗಿ ಮುಂದಿನ ಲೋಕಸಭಾ ಚುನಾವಣೆಯೊಳಗೆ ಹೆಸರು ಬದಲಿಸುವಂತೆ ಹೇಳಿದ್ದರು.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್​ ಅವರು ಕಳೆದ ಗುರುವಾರ, ಹೈದರಾಬಾದ್​ ಸೇರಿ ಹಲವು ನಗರಗಳ ಹೆಸರನ್ನು ಬದಲಿಸುವುದು ಪಕ್ಷದ ಉದ್ದೇಶವಾಗಿದೆ. ತೆಲಂಗಾಣ ರಾಜ್ಯವಾದ ನಂತರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಇಡುವುದಾಗಿ ಹೇಳಿಕೆ ನೀಡಿದ್ದರು.

Comments are closed.