
ಮಂಗಳೂರು, ನವೆಂಬರ್.3: ರಾಜ್ಯ ಸರಕಾರದ ಹೊಸ ನೀತಿಯಿಂದ ದ.ಕ.ಜಿಲ್ಲಾದ್ಯಂತ ಮರಳು ಸಮಸ್ಯೆ ಕಾಡಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಉದ್ಯಮಿಗಳು, ಜನಸಾಮಾನ್ಯರು ಕೂಡಾ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿಸಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಕೊರತೆಯಿಂದ ವ್ಯಾಪಕ ಸಮಸ್ಯೆಯಾಗಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮರಳು ತೆಗೆಯುವುದಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿವೆ. ಇದು ಸರಿಯಾದ ಕ್ರಮವಲ್ಲ. ಮುಖ್ಯಮಂತ್ರಿಯವರು ನಮ್ಮ ಜಿಲ್ಲೆಯ ಮಧ್ಯಮ, ಕೆಳ ಮಧ್ಯಮ ವರ್ಗದ ಜನರ ಕಷ್ಟವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಅವಿಭಜಿತ ದ.ಕ.ಜಿಲ್ಲೆಯಲ್ಲಿ ಜ್ವಲಂತವಾಗಿ ಕಾಡುತ್ತಿರುವ ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲೇಬೇಕು. ಈ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕರಾವಳಿಯ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಗಳೊಂದಿಗೆ ಸಭೆ ನಡೆಸಲಾಗಿತ್ತು. ಆವಾಗ 15 ದಿನಗಳೊಳಗೆ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಸಭೆ ನಡೆದು ಒಂದು ತಿಂಗಳು ಕಳೆದರೂ ಮರಳು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಜಿಲ್ಲಾಡಳಿತ ಕೂಡಾ ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಮರಳಿನ ಸಮಸ್ಯೆ ಉದ್ಭವವಾಗಿ ಸಾರ್ವಜನಿಕರಿಗೆ ತೊಂದರೆ ಆದಾಗಲೂ ಬಿಜೆಪಿ ಪ್ರತಿಭಟನೆ ಮಾಡುವ ಮೂಲಕ ಜನಪರ ನಿಲುವನ್ನು ಎತ್ತಿಹಿಡಿಯುತ್ತಾ ಬಂದಿದೆ. ಈಗ ಶಾಶ್ವತ ಪರಿಹಾರಕ್ಕಾಗಿ ನಾಗರಿಕರ ಪರವಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಕಾಮಾತ್ ಹೇಳಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ರವಿಶಂಕರ್ ಮಿಜಾರ್, ಭಾಸ್ಕರ ಚಂದ್ರ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸಂಧ್ಯಾ ಎಸ್., ಪ್ರಭಾರಾಣಿ, ಅಶೋಕ್, ಪೂಜಾ ಪೈ ಹಾಗೂ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮೋರ್ಚಾದ ಪದಾಧಿಕಾರಿಗಳು, ಪಾಲಿಕೆಯ ಬಿಜೆಪಿ ಸದಸ್ಯರು, ತೊಂದರೆಗೊಳಗಾಗಿರುವ ಗುತ್ತಿಗೆದಾರರು, ಸಂತ್ರಸ್ತರಾಗಿರುವ ನಾಗರಿಕರು ಪಾಲ್ಗೊಂಡಿದ್ದರು.
Comments are closed.