
ಬೆಂಗಳೂರು: ಅಮಿತ್ ಷಾ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ. ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಇಂಚಿಂಚು ಮಾಹಿತಿ ಹೊಂದಿರುವ ಅವರಿಗೆ ‘ಚಾಣಕ್ಯ’ ಎನ್ನುವ ಬಿರುದೂ ಇದೆ. ಆರಂಭದಲ್ಲಿ ಗುಜರಾತ್ನಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದ ಪ್ರಚಾರದ ಜವಾಬ್ದಾರಿ ಹೊತ್ತು ಒಂದಷ್ಟು ಅನುಭವ ಪಡೆದುಕೊಂಡರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
1. ಅಮಿತ್ ಷಾ ಹುಟ್ಟಿದ್ದು 1964ರ ಅ. 22ರಂದು. ಅವರ ತಂದೆ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಮೂಲತಃ ಗುಜರಾತ್ನವರಾದರೂ ಮುಂಬೈನಲ್ಲಿ ನೆಲೆಸಿದ್ದರು. ರಾಜಕೀಯಕ್ಕೆ ಬರುವುದಕ್ಕೂ ಮೊದಲು ಗುಜರಾತ್ನ ಮಾನ್ಸಾದಲ್ಲಿ ತಂದೆಯ ಬಿಸಿನೆಸ್ ನೋಡಿಕೊಳ್ಳುತ್ತಿದ್ದರು.
2. ಅಮಿತ್ ಷಾ ಅವರಿಗೆ 17 ವರ್ಷ ಇರುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ನಂಟು ಬೆಳೆಯಿತು. ಅವರು ಆಗಿನ್ನೂ ಕಾಲೇಜಿನಲ್ಲಿದ್ದರು. ಆಗ ಷಾಗೆ ನರೇಂದ್ರ ಮೋದಿ ಅವರ ಭೇಟಿ ಆಯಿತು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯಿತು. 1983ರಲ್ಲಿ ಷಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿಕೊಂಡರು. ಅದಾದ ಮೂರೇ ವರ್ಷಗಳಲ್ಲಿ ಬಿಜೆಪಿ ಪಕ್ಷ ಸೇರಿದರು. 1987ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯರಾದರು.
3. ಅದು 1991ರ ಸಮಯ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಗಾಂಧಿ ನಗರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈ ಚುನಾವಣಾ ಪ್ರಚಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಇದೇ ಅಮಿತ್ ಷಾ. ಅವರ ಕೆಲಸವನ್ನು ಶ್ಲಾಘಿಸಿ 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಪರ್ಧಿಸಿದ್ದ ಕ್ಷೇತ್ರದ ಚುನಾವಣಾ ಜವಾಬ್ದಾರಿಯನ್ನೂ ಅವರಿಗೇ ನೀಡಲಾಯಿತು.
4. ಅಮಿತ್ ಷಾ ಮೊಟ್ಟ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಿದ್ದು ಗುಜರಾತ್ನ ಸರ್ಖೇಜ್ ಕ್ಷೇತ್ರದಿಂದ. ಅದು ಉಪ ಚುನಾವಣೆಯಾಗಿತ್ತು. ಇದಾದ ಆರು ವರ್ಷಗಳ ನಂತರ ಗುಜರಾತ್ನ ಗೃಹಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2010ರಿಂದ ಈ ಸ್ಥಾನವನ್ನು ಅವರು ಭದ್ರಪಡಿಸಿಕೊಂಡಿದ್ದಾರೆ.
5. 2014ರಲ್ಲಿ ನಡೆದ ಲೋಕಸಭಾ ಚುನಾವಣೆಗೂ 10 ತಿಂಗಳು ಮೊದಲು ಅಮಿತ್ ಷಾ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದರು. ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೊಂದಿದ್ದು ಕೇವಲ 10 ಸ್ಥಾನ ಮಾತ್ರ. ಲೋಕಸಭಾ ಚುನಾವಣೆಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಬಿಜೆಪಿ ಉತ್ತರ ಪ್ರದೇಶದಲ್ಲಿ ಬರೋಬ್ಬರಿ 71 ಸ್ಥಾನ ಗಳಿಸಿಕೊಂಡು ಇತಿಹಾಸ ಬರೆದಿತ್ತು.
6. 1989-2014ರ ಅವಧಿಯಲ್ಲಿ ಅಮಿತ್ ಷಾ ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭೆಯವರೆಗೆ ಒಟ್ಟು 42 ಚುನಾವಣೆಗಳನ್ನು ಎದುರಿಸಿದ್ದಾರೆ. ಆ ಪೈಕಿ ಅವರು ಒಂದೇ ಒಂದು ಚುನಾವಣೆಯನ್ನು ಸೋತಿಲ್ಲ ಎಂಬುದು ಅವರ ಹೆಚ್ಚುಗಾರಿಕೆ. ಸದ್ಯ ಅವರು ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 43ನೇ ಚುನಾವಣೆಯನ್ನೂ ಗೆದ್ದಿದ್ದಾರೆ.
7. ಅಮಿತ್ ಷಾ ತಾಯಿಗೆ ತುಂಬ ಹತ್ತಿರವಾಗಿದ್ದರು. ಯಾವುದೇ ಸಭೆ ಮುಗಿಸಿ ಬಂದರೂ, ಎಷ್ಟೇ ದಣಿದಿದ್ದರೂ ಅವರು ತಾಯಿ ಜತೆ ಒಂದು ಗಂಟೆ ಕಳೆಯದೇ ನಿದ್ರಿಸುತ್ತಿರಲಿಲ್ಲ. 2010ರಲ್ಲಿ ಅವರ ತಾಯಿ ಮೃತಪಟ್ಟರು. ನಂತರ ಷಾ ಜೈಲಿಗೆ ಹೋಗುವ ಪ್ರಸಂಗವೂ ಎದುರಾಯಿತು.
8. ಅಮಿತ್ ಷಾ ತಾಯಿ ಮಹಾತ್ಮಾ ಗಾಂಧೀಜಿಯ ಹಿಂಬಾಲಕರಾಗಿದ್ದರು. ಇದು ಸಹಜವಾಗಿಯೇ ಅಮಿತ್ ಷಾ ಮೇಲೆ ಪ್ರಭಾವ ಬೀರಿತ್ತು. ಗಾಂಧಿ ಬರೆದ ಪುಸ್ತಕಗಳನ್ನು ಅವರು ಓದುತ್ತಿದ್ದರು. ಅವರ ತತ್ವವನ್ನು ಪಾಲಿಸುತ್ತಿದ್ದರು. ಈ ವೇಳೆ ಸ್ವಾಮಿ ವಿವೇಕಾನಂದ ಅವರ ಪುಸ್ತಕಗಳನ್ನು ಓದುವಂತೆ ಷಾಗೆ ಮೋದಿ ಸೂಚಿಸಿದ್ದರು. ಅವರ ಸೂಚನೆಯನ್ನು ಅಮಿತ್ ಷಾ ಪಾಲಿಸಲು ಆರಂಭಿಸಿದ್ದರು.
9. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಪೂರ್ಣ ಜವಾಬ್ದಾರಿಯನ್ನು ಅಮಿತ್ ಷಾ ಹೊತ್ತುಕೊಂಡಿದ್ದರು. ಮೋದಿ ವಹಿಸಿದ್ದ ಜವಾಬ್ದಾರಿಯನ್ನು ತುಂಬ ಗಂಭೀರವಾಗಿ ಪರಿಗಣಿಸಿದ್ದ ಅವರು, ದಿನದಲ್ಲಿ ಕೇವಲ 5 ಗಂಟೆ ಮಾತ್ರ ನಿದ್ರಿಸುತ್ತಿದ್ದರು.
10. ಕಳೆದ 4 ವರ್ಷಗಳಲ್ಲಿ ಬಿಜೆಪಿಯಲ್ಲಿ ಭಾರಿ ಬದಲಾವಣೆ ಆಗಿದೆ. ಅದರಲ್ಲಿ ಅಮಿತ್ ಷಾ ಪಾತ್ರ ದೊಡ್ಡದಿದೆ ಎಂಬುದು ಕಾರ್ಯಕರ್ತರಿಗೆ ತಿಳಿದಿದೆ. ಇದೇ ಕಾರಣಕ್ಕೆ ಅವರಿಗೆ ಆಧುನಿಕ ಚಾಣಕ್ಯ ಎನ್ನುವ ಬಿರುದು ನೀಡಲಾಗಿದೆ. ಷಾ ಅವರ ಮಿದುಳು ಮಷಿನ್ಗನ್ ವೇಗದಲ್ಲಿ ಕೆಲಸ ಮಾಡುತ್ತದೆ ಎಂಬುದು ಅವರನ್ನು ಹತ್ತಿರದಿಂದ ಕಂಡ ಕಾರ್ಯಕರ್ತರ ಅಭಿಪ್ರಾಯ.
Comments are closed.