
ತಿರುಪತಿ: ತಿರುಪತಿ ತಿಮ್ಮಪ್ಪನಿಗೆ ಅರ್ಪಿಸುವ ಕಾಣಿಕೆಗಳಿಗೆ ಯಾವುದೇ ಕೊರತೆ ಇರಲ್ಲ. ಇತ್ತೀಚೆಗೆ ಭಕ್ತರೊಬ್ಬರು ತಿಮ್ಮಪ್ಪನಿಗೆ 2 ಕೋಟಿ ರೂ. ಬೆಲೆಬಾಳುವ ಸ್ವರ್ಣ ಖಡ್ಗವನ್ನು ಕಾಣಿಕೆ ರೂಪದಲ್ಲಿ ನೀಡಿದ್ದರು. ಇದೀಗ ಇನ್ನೊಬ್ಬ ಭಕ್ತರು ಬಂಗಾರದ ಕಿರೀಟ, ಬೆಳ್ಳಿ ಪಾದುಕೆಗಳನ್ನು ಸಮರ್ಪಿಸಿದ್ದಾರೆ.
ತಮಿಳುನಾಡು ವೇಲೂರು ಜಿಲ್ಲೆ ಗುಡಿಯಾತ್ತಮ್ ಮೂಲದ ಕನ್ನಯ್ಯ ಕುಮಾರ್ ದೊರಸ್ವಾಮಿ ಯಾದವ್ ದಂಪತಿಗಳು ಸೋಮವಾರ ತಿರುಪತಿ ಟಿಟಿಡಿ ಮುಖ್ಯಸ್ಥ ಪುಟ್ಟಾ ಸುಧಾಕರ್ ಯಾದವ್ ಅವರನ್ನು ಭೇಟಿ ಮಾಡಿ ಈ ಕಾಣಿಕೆಯನ್ನು ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಸುಧಾಕರ್ ಯಾದವ್, “ತಿಮ್ಮಪ್ಪನ ದರ್ಶನ ಪಡೆಯುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಭಕ್ತರು ವಿವಿಧ ರೂಪದಲ್ಲಿ ಕಾಣಿಕೆಗಳನ್ನು ಸಮರ್ಪಿಸಿ ದೇವರ ಮೇಲಿನ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ” ಎಂದಿದ್ದಾರೆ.
ಬಂಗಾರದ ಕಿರೀಟ
ಇನ್ನು ತಮಿಳುನಾಡನ ವೇಲೂರು ಜಿಲ್ಲೆಯ ಗುಡಿಯಾತ್ತಮ್ ಮೂಲದ ಭಕ್ತ ದೊರಸ್ವಾಮಿ ಯಾದರ್ 28 ಲಕ್ಷ ರೂ. ಮೌಲ್ಯದ 1.10 ಕೆ.ಜಿ ತೂಕದ ಬಂಗಾರದ ಕಿರೀಟ, 2 ಲಕ್ಷ ರೂ. ಬೆಲೆಬಾಳುವ 1.60 ಕೆ.ಜಿ ತೂಕದ ಎರಡು ಬೆಳ್ಳಿ ಪಾದುಕೆಗಳನ್ನು ತಿರುಮಲವಾಸ ಗೋವಿಂದನಿಗೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಿಮ್ಮಪ್ಪನ ಭಕ್ತರಾದ ದೊರಸ್ವಾಮಿ ಮಾತನಾಡುತ್ತಾ, “ತಿರುಮಲ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ತಾನು ಹಾಲಿನ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸಿದ್ದೇನೆ. ಅದರಲ್ಲಿ ಬಂದ ಲಾಭವನ್ನೇ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದ್ದೇನೆ” ಎಂದಿದ್ದಾರೆ.
Comments are closed.