ರಾಷ್ಟ್ರೀಯ

ವಾಜಪೇಯಿಯ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

Pinterest LinkedIn Tumblr

ಹೊಸದಿಲ್ಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ಶಂಕಿತ ಜನರ ಗುಂಪೊಂದು ಹಲ್ಲೆ ನಡೆಸಿದೆ.

ಅಟಲ್ ಜೀ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇರಿಸಲಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸ್ವಾಮಿ ಅಗ್ನಿವೇಶ್‌ಗೆ ಅಲ್ಲಿ ನೆರೆದಿದ್ದ ಜನರಲ್ಲಿ ಕೆಲವರು ಘೇರಾವ್ ಹಾಕಿದ್ದು, ಮರಳಿ ಹೋಗುವಂತೆ ಘೋಷಣೆ ಕೂಗಿದರು.

ಕ್ರೋಧಿತ ಜನರ ಗುಂಪು ಜನತಾ ಪಕ್ಷದ ಮಾಜಿ ಸಂಸದ ಅಗ್ನಿವೇಶ್ ಅವರನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯಾವಳಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅವರು ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ಎಂದು ಊಹಿಸಲಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಅಗ್ನಿವೇಶ್‌ ಅವರನ್ನು ವ್ಯಾನ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಇತ್ತೀಚಿಗೆ, ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಯುವ ಮೋರ್ಚಾ ಮತ್ತು ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜಾರ್ಖಂಡ್‌ನ ಪುಕುರ್ ಎಂಬಲ್ಲಿ ನಡೆದಿತ್ತು.

Comments are closed.