ರಾಷ್ಟ್ರೀಯ

ಕೇರಳದಲ್ಲಿ ನಿಲ್ಲದ ವರುಣನ ಆರ್ಭಟ: ಒಂದೇ ದಿನ 25 ಮಂದಿ ಬಲಿ; ಮೃತರ ಸಂಖ್ಯೆ 67ಕ್ಕೆ ಏರಿಕೆ

Pinterest LinkedIn Tumblr


ತಿರುವನಂತಪುರಂ: ಕೇರಳದಲ್ಲಿ ರಚ್ಚೆ ಹಿಡಿದು ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ನೆರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಬುಧವಾರ ಒಂದೇ ದಿನ 25 ಮಂದಿ ಮಳೆ ಅವಘಡಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಆ.8ರಿಂದ ಇದುವರೆಗೂ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಒಟ್ಟು 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ತೀವ್ರ ನೆರೆ ಸಂಕಷ್ಟಕ್ಕೆ ಸಿಲುಕಿದ್ದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಇನ್ನೂ 24 ಗಂಟೆಯಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಬಹುತೇಕ ಎಲ್ಲಾ ಡ್ಯಾಂಗಳಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ, ನೆರೆ ಪರಿಸ್ಥಿತಿ ವಿಷಮಿಸಿದ್ದು ಕಣ್ಣೂರ್‌, ವಯನಾಡ್‌, ಕೋಯಿಕ್ಕೋಡ್‌ ಜಿಲ್ಲೆಗಳ ಬಹುತೇಕ ಭಾಗ ಜಲಾವೃತವಾಗಿದೆ. ಭೂ ಕುಸಿತ, ಮನೆ ಕುಸಿತ ಪ್ರಕರಣಗಳು ವರದಿಯಾಗಿವೆ. ಇಡುಕ್ಕಿಯಲ್ಲಿ ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ ಐದು ಮಂದಿ ಕಾಣೆಯಾಗಿದ್ದಾರೆ. ನೆರೆ ಪೀಡಿತ ಜಿಲ್ಲೆಗಳಲ್ಲಿ ಮತ್ತಷ್ಟು ಮಂದಿಯನ್ನು ಗಂಜಿ ಕೇಂದ್ರಗಳಿಗೆ ರವಾನಿಸಲಾಗಿದೆ. ಆದರೆ, ನೆರೆಯಿಂದ ಗಂಜಿ ಕೇಂದ್ರಗಳೂ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ರಚ್ಚೆ ಹಿಡಿದ ಮಳೆ: ಕೇರಳದಲ್ಲಿ ಒಂದೇ ದಿನ 25 ಸಾವು

ಈ ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯದ ಪರಿಸ್ಥಿತಿಯನ್ನು ಅತ್ಯಂತ ಗಂಭೀರ ಎಂದು ಬಣ್ಣಿಸಿದ್ದು, ಸಂಕಷ್ಟ ಎದುರಿಸಲು ಸರಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

* ಕಳೆದ 94 ವರ್ಷದಲ್ಲೇ ಅತ್ಯಂತ ಭೀಕರ ನೆರೆ ಹಾವಳಿ

*ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ 35 ಡ್ಯಾಂಗಳ ನೀರು ಹೊರಕ್ಕೆ

* ಕೊಚ್ಚಿಹೋಗುವಷ್ಟು ನೀರಿದ್ದರೂ ಕುಡಿಯುವ ನೀರಿಗಾಗಿ ಹಾಹಾಕಾರ

* ವಿದ್ಯುತ್‌, ದೂರವಾಣಿ, ರಸ್ತೆ, ರೈಲು ಸಂಪರ್ಕವಿಲ್ಲದೆ ಜನರ ಪರದಾಟ

* ಪ್ರಧಾನಿ, ಗೃಹ ಸಚಿವ ರಾಜನಾಥ್‌ಗೆ ಸಿಎಂ ಪಿಣರಾಯಿ ವಿಜಯನ್‌ ಕರೆ, ಮತ್ತಷ್ಟು ಸೇನಾಪಡೆ, ರಕ್ಷಣಾ ಸಲಕರಣೆಗಾಗಿ ಮೊರೆ

* ಸಣ್ಣ ವಿಮಾನಗಳನ್ನು ನೌಕಾಪಡೆ ಏರ್‌ಪೋರ್ಟ್‌ಗಳಲ್ಲಿ ಇಳಿಸಲು ಅನುಮತಿ ಕೋರಿದ ಸಿಎಂ

* ಮುಲ್ಲಪೆರಿಯಾರ್‌ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹರಿಸಲು ತ.ನಾಡು ಅನುಮತಿ

* ಪುಣೆಯಿಂದ ಕೇರಳಕ್ಕೆ 4 ಹೆಚ್ಚುವರಿ ಎನ್‌ಡಿಆರ್‌ಎಫ್‌ ತಂಡಗಳ ರವಾನೆ

* ಕಳೆದ ಮೇನಿಂದ ಇದುವರೆಗೂ ರಾಜ್ಯದಲ್ಲಿ 200 ಜನರು ಮಳೆಗೆ ಬಲಿ

ಕೊಚ್ಚಿ ಏರ್‌ಪೋರ್ಟ್‌ ಬಂದ್‌

ಭಾರಿ ಮಳೆ ಮತ್ತು ನೆರೆಯಿಂದಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಶನಿವಾರದವರೆಗೂ ಬಂದ್‌ ಮಾಡಲಾಗಿದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದ ಹಾಗೂ ಅಲ್ಲಿಂದ ಇಲ್ಲಿಗೆ ಆಗಮಿಸಲಿದ್ದ 10 ವಿಮಾನಗಳ ಹಾರಾಟ ಬುಧವಾರ ರದ್ದುಗೊಂಡ ಕಾರಣ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.

ತೀವ್ರ ಮಳೆಯಿಂದ ಏರ್‌ಪೋರ್ಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ರನ್‌ ವೇ, ಟ್ಯಾಕ್ಸಿ ವೇ, ಪಾರ್ಕಿಂಗ್‌ ಸೇರಿದಂತೆ ಎಲ್ಲೆಡೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ.

Comments are closed.