
ತಿರುವನಂತಪುರಂ: ಕೇರಳ ರಾಜ್ಯದ ಪ್ರಮುಖ ಹಬ್ಬವಾದ ಓಣಂ ಆಚರಿಸಲು ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ತಮ್ಮ ಊರಿಗೆ ಮರಳುತ್ತಾರೆ. ಆದರೆ, ಈ ವರ್ಷ ಕೇರಳದಲ್ಲಿ ಓಣಂ ಹಬ್ಬವಿಲ್ಲ.
ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾವುಗಳು ಕೂಡ ಸಂಭವಿಸಿದೆ. ರಾಜ್ಯದ ಅನೇಕ ಹಳ್ಳಿಗಳು ಮುಳುಗಡೆಯಾಗಿದೆ. ಇದರಿಂದಾಗಿ ಈ ಬಾರಿಯ ಓಣಂ ಹಬ್ಬವನ್ನು ಸರ್ಕಾರ ಕ್ಯಾನ್ಸಲ್ ಮಾಡಿದ್ದು, ಆ ಹಬ್ಬಕ್ಕಾಗಿ ಖರ್ಚು ಮಾಡಲು ಉದ್ದೇಶಿಸಿದ್ದ 30 ಕೋಟಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಪ್ರವಾಹ ಸಂತ್ರಸ್ತರಿಗೆ ನೀಡಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಇಂದು ಅಧಿಕೃತವಾಗಿ ಘೋಷಣೆ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯಾದ್ಯಂತ ಓಣಂ ಹಬ್ಬವನ್ನು ಆಚರಿಸದಿರಲು ನಿರ್ಧರಿಸಲಾಗಿದೆ. ಆಗಸ್ಟ್ 25ರಿಂದ ಒಂದು ವಾರಗಳ ಕಾಲ ನಡೆಸಲಾಗುತ್ತಿದ್ದ ಓಣಂ ಹಬ್ಬದ ಸಂಭ್ರಮವನ್ನು ಅನುಭವಿಸುವ ಪರಿಸ್ಥಿತಿಯಲ್ಲೂ ಕೇರಳದ ಜನತೆ ಇಲ್ಲ.
ನಮ್ಮ ರಾಜ್ಯದಲ್ಲಿ ಆಗಿರುವ ಪ್ರವಾಹ ಅತ್ಯಂತ ದೊಡ್ಡ ದುರಂತ. ಒಟ್ಟಾರೆ 444 ಹಳ್ಳಿಗಳು ಈ ಪ್ರವಾಹಕ್ಕೆ ಸಿಕ್ಕಿ ನಾಶವಾಗಿವೆ. ಓಣಂಗಾಗಿ ಮೀಸಲಿಟ್ಟಿದ್ದ ಹಣವನ್ನು ಈ ಪ್ರವಾಹದಲ್ಲಿ ಸಿಲುಕಿರುವ ಜನರ ಮೂಲಸೌಕರ್ಯಕ್ಕಾಗಿ ಬಳಸಲಾಗುವುದು. ಇದರ ಜೊತೆಗೆ ಬೇರೆಯವರ ಸಹಾಯವನ್ನು ಕೂಡ ಕೋರುತ್ತಿದ್ದೇವೆ. ನಮಗೆ ಈ ಆಘಾತದಿಂದ ಹೊರಬರಲು ಬಹಳ ಸಮಯ ಬೇಕಾಗುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಕೇರಳದಲ್ಲಿ ಸುರಿದ ಮಳೆಯಲ್ಲಿ 38 ಜನ ಸಾವನ್ನಪ್ಪಿದ್ದಾರೆ, 4 ಜನ ಕಾಣೆಯಾಗಿದ್ದಾರೆ. ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಜನ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ರಾಜ್ಯಮಟ್ಟದ ಬ್ಯಾಂಕರ್ಸ್ ಕಮಿಟಿಯಯ ಅಧಿಕಾರಿಗಳನ್ನು ಸರ್ಕಾರ ಸಂಪರ್ಕಿಸಿದ್ದು, ಕೇಂದ್ರದಿಂದ ಬಿಡುಗಡೆಯಾಗಿರುವ ಪರಿಹಾರದ ಮೊತ್ತ ಯಾವಾಗ ಕೈಸೇರುತ್ತದೆ ಎಂಬ ಕುರಿತು ಚರ್ಚಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹಣದ ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ.
Comments are closed.