ರಾಷ್ಟ್ರೀಯ

ನನಗೆ ಮದುವೆಯಾಗಿದೆ: ರಾಹುಲ್​ ಗಾಂಧಿ

Pinterest LinkedIn Tumblr


ಹೈದರಾಬಾದ್​: ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಮದುವೆ ಬಗ್ಗೆ ಊಹಾಪೋಹಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿವೆ. ಇಟಲಿಯಲ್ಲಿ ಮದುವೆಯಾಗಿದ್ದಾರೆ, ಕಾಂಗ್ರೆಸ್​ನ ಮಾಜಿ ಸಂಸದೆ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾರನ್ನ ಆಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು. ಆದರೆ ರಾಹುಲ್​ ಗಾಂಧಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಆದರೀಗ ತಮ್ಮ ಮದುವೆಯ ಬಗ್ಗೆ ರಾಹುಲ್​ ಗಾಂಧಿ ಮಾತನಾಡಿದ್ದಾರೆ.

“ನನಗೆ ಈಗಾಗಲೇ ಮದುವೆಯಾಗಿದೆ. ನಿಮಗೆ ಯಾರು ಹೇಳಿದ್ದು ನನಗೆ ಮದುವೆಯಾಗಿಲ್ಲ ಎಂದು?,” ಈ ಮಾತನ್ನು ಹೇಳಿದ್ದು ರಾಹುಲ್​ ಗಾಂಧಿ. ಸಂಪಾದಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್​ ಈ ರೀತಿ ಉತ್ತರ ಕೊಟ್ಟ ತಕ್ಷಣ ಎಲ್ಲರೂ ಸ್ಥಬ್ದರಾದರು. ಇಷ್ಟು ದಿನಗಳ ಕಾಲ ಕಾಯುತ್ತಿದ್ದ ಉತ್ತರವನ್ನು ರಾಹುಲ್​ ಇಷ್ಟು ಅನಾಯಾಸವಾಗಿ ಹೇಳಿ ಬಿಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಯಾರು ರಾಹುಲ್​ ಹೆಂಡತಿ?:

ತಮಗೆ ಮದುವೆಯಾಗಿದೆ ಎಂಬುದನ್ನು ಹೇಳಿದ ನಂತರ ರಾಹುಲ್​ ಗಾಂಧಿ, ನಂತರ ಇದೊಂದು ಹಾಸ್ಯ ಚಟಾಕಿ ಎಂಬ ರೀತಿ ಪ್ರತಿಕ್ರಿಯಿಸಿದರು. ನಾನು ಮದುವೆಯಾಗಿರುವುದು ನಿಜ ಆದರೆ ಅದು ಕಾಂಗ್ರೆಸ್​ ಪಕ್ಷದ ಜತೆ. ಕಾಂಗ್ರೆಸ್​ ಪಕ್ಷದ ಜತೆ ನನಗೆ ಮದುವೆಯಾಗಿ ಯಾವುದೋ ಕಾಲವಾಗಿದೆ, ಅದರ ಜತೆಗೇ ನಾನು ಬಾಳ್ವೆ ನಡೆಸುತ್ತಿದ್ದೇನೆ ಎಂಬ ರೀತಿ ರಾಹುಲ್​ ಮಾತನಾಡಿದರು.

ರಾಹುಲ್​ ಗಾಂಧಿ ಕರ್ನಾಟಕದ ಬೀದರ್​ ಸಮಾವೇಶದಲ್ಲಿ ಭಾಗಿಯಾದ ನಂತರ ಹೈದರಾಬಾದ್​ಗೆ ತೆರಳಿದರು. ಈ ವೇಳೆ ಹೈದರಾಬಾದ್​ನ ಮಾಧ್ಯಮ ಸಂಪಾದಕರ ಜತೆ ಸಂವಾದದಲ್ಲಿ ಭಾಗವಹಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ನರೇಂದ್ರ ಮೋದಿ 2019 ರಲ್ಲಿ ಪ್ರಧಾನ ಮಂತ್ರಿಯಾಗುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 230 ಸೀಟುಗಳನ್ನು ಕೂಡ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಮೋದಿ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ ಎಂಬ ಮಾತೇ ಬರುವುದಿಲ್ಲ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿಯೇತರ ಪಕ್ಷಗಳ ನಡುವಿನ ಮೈತ್ರಿ ಕಾರಣದಿಂದಾಗಿ ಬಿಜೆಪಿಯ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ಬಹುಮತ ಪಡೆಯುವ ಸಂದರ್ಭದಲ್ಲಿ ಪ್ರಧಾನಿ ಯಾರು? ಎಂಬ ಪ್ರಶ್ನೆಯೊಂದಕ್ಕೆ ರಾಹುಲ್​​​ ನೇರ ಉತ್ತರ ನೀಡಲು ತಪ್ಪಿಸಿಕೊಂಡರು. ಪಕ್ಷದ ರಾಜ್ಯ ಘಟಕಗಳು ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಮೈತ್ರಿ ಹೊಂದಲು ಮುಕ್ತವಾಗಿರುತ್ತವೆ ಎಂದು ರಾಹುಲ್​ ಹೇಳಿದರು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಅವರಿಗಿತ್ತು. 2014 ರ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್​ ಪ್ರಭಾವ ಅಷ್ಟಾಗಿ ಇರಲಿಲ್ಲ. ಆಗ ಪಕ್ಷ ಬೆಳೆಯುತ್ತಿತ್ತು ಎಂದರು.

ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಬಗ್ಗೆ ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಸುರಕ್ಷತೆ ಇಲ್ಲ ಎಂದ ಅವರು, ರೈತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಲು ರಾಹುಲ್​​ ಕರೆ ನೀಡಿದರು. ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳನ್ನು ನೀಡುವ ಭರವಸೆಯನ್ನು ಪೂರೈಸಲು ಮೋದಿ ವಿಫಲವಾಗಿದ್ದಾರೆ ಎಂದು ಹೇಳಿದರು.

‘ಚೀನಾವು 24 ಗಂಟೆಗಳಲ್ಲಿ 50,000 ಜನರಿಗೆ ಉದ್ಯೋಗಾವಕಾಶವನ್ನು ನೀಡುತ್ತದೆ. ಆದರೆ ಭಾರತದಲ್ಲಿ ಇದೇ 24 ಗಂಟೆಗಳಲ್ಲಿ ಕೇವಲ 458 ಜನರು ಉದ್ಯೋಗ ಪಡೆಯುತ್ತಾರೆ’ ಎಂದರು.

Comments are closed.