
ಸುಬ್ರಹ್ಮಣ್ಯ, ಆಗಸ್ಟ್ 14: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಅನಿತಾ ಕುಮಾರ ಸ್ವಾಮಿ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ದೇವೇಗೌಡರ ಪತ್ನಿ ಚೆನ್ನಮ್ಮ ಸಹಿತಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶ್ರೀ ಕ್ಷೇತ್ರದಲ್ಲಿ ಅಕ್ಕಿ- ಬೆಲ್ಲ, ಒಣದ್ರಾಕ್ಷಿಯಿಂದ ತುಲಾಭಾರ ಸೇವೆ ಸಲ್ಲಿಸಿದರು. ನಾಳೆ ನಾಗರ ಪಂಚಮಿ ಇರುವುದರಿಂದ ಪಂಚಮಿಯ ಮುನ್ನ ದಿನವಾದ ಇಂದು ಶ್ರೀ ಕ್ಷೇತ್ರದಲ್ಲಿ ಆಶ್ಲೇಷ ಬಲಿ, ಪಂಚಾಭಿಷೇಕ ಸೇವೆ ಸಲ್ಲಿಸಲಿದರು.

ಇದೇ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಶ್ಲೇಷ ಬಲಿ ಸೇವೆ ನೆರವೇರಿಸಿದರು.ಅವರೊಂದಿಗೆ ಪತ್ನಿ ಚೆನ್ನಮ್ಮ ಅವರು ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗದರು.
ಭಾರೀ ಮಳೆ ಹಿನ್ನೆಲೆ ಮಾರ್ಗ ಬದಲಿಸಿದ ಸಿ.ಎಂ :
ಇದಕ್ಕೂ ಮೊದಲು ಸೋಮವಾರದಂದು ಎಚ್.ಡಿ.ಕುಮಾರಸ್ವಾಮಿಯವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಂಜುನಾಥನಿಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯ ಸೇವೆ ಸಲ್ಲಿಸಿದರು.
ಬಳಿಕ ಅಲ್ಲಿಯೇ ವಾಸ್ತವ್ಯ ಹೊಂದಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇಂದು ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ತೆರಳುವ ಸಂದರ್ಭ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಸಂಕಷ್ಟ ತಂದಿಟ್ಟಿದ್ದು ,ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾರ್ಗ ಬದಲಿಸಿ ತೆರಳಬೇಕಾಯಿತು.

ವಿಶೇಷ ಭದ್ರತಾ ವ್ಯವಸ್ಥೆ :
ಧರ್ಮಸ್ಥಳದಲ್ಲಿ ತಂಗಿದ್ದ ಸಿಎಂ ಕುಟುಂಬ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿ ಮೂಲಕ ತೆರಳಬೇಕಿತ್ತು. ಆದರೆ ಕಡಬದ ಹೊಸ ಮಠ ಸೇತುವೆ ಸಂಪೂರ್ಣ ಮುಳುಗಡೆಯಾದ ಹಿನ್ನಲೆಯಲ್ಲಿ ಪೂತ್ತೂರಿಗೆ ತೆರಳಿ ಜಾಲ್ಸೂರು, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಯಿತು. ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಿ ಮುಖ್ಯಮಂತ್ರಿಗಳಿದ್ದ ಕಾರು ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
Comments are closed.