
ನವದೆಹಲಿ: ಅತ್ಯಾಚಾರ ಆರೋಪ ಹೊತ್ತಿಕೊಂಡು ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಕೇರಳದ 4 ಜನ ಪಾದ್ರಿಗಳಲ್ಲಿ ಇಬ್ಬರು ಇಂದು ಕೇರಳದ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಫಾದರ್ ಅಬ್ರಹಾಂ ವರ್ಗೀಸ್ ಮತ್ತು ನಾಲ್ಕನೇ ಆರೋಪಿ ಫಾದರ್ ಜೈಸ್ ಕೆ. ಜಾರ್ಜ್ ಕೊಲ್ಲಂ ಕೋರ್ಟ್ಗೆ ಶರಣಾತರಾಗಿದ್ದಾರೆ. ಸುಪ್ರೀಂ ಕೋರ್ಟ್ ಈ ಇಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆ.06 ರಂದು ತಿರಸ್ಕರಿಸಿತ್ತು. ಅಲ್ಲದೇ ಆ.13 ರೊಳಗೆ ಶರಣಾಗಿ ಪೊಲೀಸರ ತನಿಖೆಗೆ ಸಹಕರಿಸಬೇಕೆಂದು ಆಜ್ಞೆ ನೀಡಿತ್ತು. ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಾಧಿಪೀಠವು ಈ ಇಬ್ಬರು ಪಾದ್ರಿಗಳು ಒಂದು ಸಲ ಶರಣಾದರೆ ಜಾಮೀನು ಪಡೆದುಕೊಳ್ಳಬಹುದು ಎಂದು ಹೇಳಿತ್ತು.
ಕೇರಳದ ಮಲಂಕರ ಆರ್ಥಡಕ್ಸ್ ಚರ್ಚ್ನ 4 ಜನ ಪಾದ್ರಿಗಳು ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಗಂಡ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಫಾದರ್ ಅಬ್ರಾಹಿಂ ವರ್ಗೀಸ್, ಫಾದರ್ ಜಾಬ್ ಮ್ಯಾಥ್ಯೂ, ಫಾದರ್ ಜಾಯಿಸ್ ಕೆ. ಜಾರ್ಜ್, ಫಾದರ್ ಜಾನ್ಸನ್ ಮ್ಯಾಥ್ಯೂ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದರು.
ತನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡಿ, ಅದನ್ನು ಯಾರಿಗೂ ಹೇಳದಂತೆ ಬ್ಲಾಕ್ಮೇಲ್ ಮಾಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು. ‘ನನಗೆ ದೂರದ ಸಂಬಂಧಿಯಾಗಿರುವ ಫಾದರ್ ಅಬ್ರಾಹಿಂ ವರ್ಗೀಸ್ ನಾನು 16 ವರ್ಷದವಳಾಗಿದ್ದಾಗಿನಿಂದಲೂ ಅತ್ಯಾಚಾರ ಮಾಡುತ್ತಿದ್ದರು. ಈ ವಿಷಯವನ್ನು ನನ್ನ ಜೂನಿಯರ್ ಆಗಿದ್ದ ಫಾದರ್ ಜಾಬ್ ಮ್ಯಾಥ್ಯೂ ಬಳಿ ಹೇಳಿಕೊಂಡಾಗ ಆತನೂ ನನ್ನನ್ನು ಬಳಸಿಕೊಂಡಿದ್ದಲ್ಲದೆ, ಈ ವಿಷಯವನ್ನು ಬೇರೆಯವರ ಬಳಿ ಹೇಳಿದರೆ ಎಲ್ಲ ವಿಷಯವನ್ನು ನನ್ನ ಗಂಡನಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಷಯವನ್ನು ಕೌನ್ಸಿಲರ್ ಬಳಿ ಹೇಳಿದರೆ ಅವರೂ ನನಗೆ ಸಹಾಯ ಮಾಡದೆ ಅನುಚಿತವಾಗಿ ವರ್ತಿಸಿದ್ದರು. ಚರ್ಚ್ನ ನಾಲ್ವರು ಪಾದ್ರಿಗಳೂ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಕೊನೆಗೆ, ನನ್ನ ಗಂಡನಿಗೆ ಈ ವಿಷಯ ಗೊತ್ತಾದ ಮೇಲೆ ಆ ಪಾದ್ರಿಗಳ ನಡವಳಿಕೆಯನ್ನು ಚರ್ಚ್ನವರ ಗಮನಕ್ಕೆ ತಂದೆವು. ಆದರೆ, ಈ ಬಗ್ಗೆ ವಿಚಾರಿಸಲು ಚರ್ಚ್ನವರು ಮೂರು ತಿಂಗಳು ತೆಗೆದುಕೊಂಡರು ಎಂದು ಮಹಿಳೆ ಹೇಳಿಕೆ ನೀಡಿದ್ದರು.
Comments are closed.