
ಮಂಗಳೂರು : ಸುರತ್ಕಲ್ ಟೋಲ್ ಕೇಂದ್ರದ ಟೋಲ್ ಸಂಗ್ರಹ ಗುತ್ತಿಗೆ ಅವಧಿ ಜುಲೈ 30ಕ್ಕೆ ಕೊನೆಗೊಂಡ ಬಳಿಕ ಕೂಡ ನಿಯಮ ಬಾಹಿರವಾಗಿ ನಡೆಸಲಾಗುತ್ತಿರುವ ಟೋಲ್ ಸಂಗ್ರಹವನ್ನು ವಿರೋಧಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಾಮೂಹಿಕ ಧರಣಿಯನ್ನು ಆ. 14ರಂದು ಆಯೋಜಿಸಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸುರತ್ಕಲ್ ಟೋಲ್ ಕೇಂದ್ರದ ಟೋಲ್ ಸಂಗ್ರಹ ಗುತ್ತಿಗೆ ಅವಧಿ ಜುಲೈ 30ಕ್ಕೆ ಕೊನೆಗೊಂಡ ಬಳಿಕ ಸಂಗ್ರಹ ಸ್ಥಗಿತ ಗೊಳಿಸಲಾಗುವುದಾಗಿ ಹೇಳಿದ್ದರೂ ಮತ್ತೆ ಗುತ್ತಿಗೆ ನವೀಕರಣಗೊಳಿಸಿರುವುದನ್ನು ಕೂಡಲೇ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ನಿಯಮ ಬಾಹಿರವಾಗಿ ನಡೆಸಲಾಗುತ್ತಿರುವ ಟೋಲ್ ಸಂಗ್ರಹವನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಯಲಿದೆ. ಆ. 14ರಂದು ಬೆಳಗ್ಗೆ 10 ಗಂಟೆಯಿಂದ ಸುರತ್ಕಲ್ ಟೋಲ್ ಕೇಂದ್ರದ ಸಮೀಪ ಒಂದು ದಿನದ ಸಾಮೂಹಿಕ ಧರಣಿ ನಡೆಯಲಿದೆ ಎಂದು ಅವರು ಹೇಳಿದರು.
ಜನತೆಯ ತೀವ್ರ ವಿರೋಧದ ನಡುವೆಯೂ ಸುರತ್ಕಲ್ ಟೋಲ್ ಕೇಂದ್ರವನ್ನು ನಿರ್ಮಿಸಲಾಗಿತ್ತು. ಬಳಿಕ 10 ಕಿ.ಮೀ. ಅಂತರದ ಹೆಜಮಾಡಿಯ ಟೋಲ್ ಕೇಂದ್ರ ಆರಂಭಗೊಂಡ ಬಳಿಕ ಮುಚ್ಚಲಾಗುುದು ಎಂಬ ಭರವಸೆ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾಚರಣೆ ಆರಂಭಿಸಿದ್ದರೂ ಸುರತ್ಕಲ್‌ನಲ್ಲಿ ಸುಂಕ ವಸೂಲಿಯನ್ನು ನಿಲ್ಲಿಸಲಾಗಲಿಲ್ಲ.

ಸುರತ್ಕಲ್‌ನ ಅಕ್ರಮ ಟೋಲ್ ಕೇಂದ್ರವನ್ನು ತಕ್ಷಣ ಮುಚ್ಚಬೇಕು. ಸರ್ವಿಸ್ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಹೆದ್ದಾರಿ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿ ಮೂಲಕ ಮುಚ್ಚಬೇಕು. ರಸ್ತೆ ನಿರ್ವಹರಣಾ ಗುತ್ತಿಗೆ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು. ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಸಮಿತಿಯು ಧರಣಿ ನಡೆಸಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ನಂತೂರು ಸುರಕ್ಕಲ್ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಹೊರತಾಗಿಯೂ ಟೋಲ್ ಕೇಂದ್ರದ ಗುತ್ತಿಗೆಯನ್ನು ನವೀಕರಿಸಿರುವುದರ ಹಿಂದೆ ಹೆದ್ದಾರಿ ಪ್ರಾಧಿಕಾರ, ಸಂಸದರು, ಗುತ್ತಿಗೆದಾರರ ಅಪವಿತ್ರ ಮೈತ್ರಿ ಕಾರಣ ಎಂದು ಅವರು ಆರೋಪಿಸಿದರು.
ಮನಪಾ ಸದಸ್ಯರಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮುಲ್ಕಿ ವಲಯ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಕೆ.ಯು. ಮೂಸಬ್ಬ, ಡಿವೈಎಫ್‌ಐ ಮುಖಂಡರಾದ ಅರ್ಮುಲ್ ಅಹಮ್ಮದ್, ಲಾರಿ ಮಾಲಕ ರಹೀಂ ಪಕ್ಷಿಕೆರೆ, ಬಸ್ಸು ಮಾಲಕ ಸಮದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.