ರಾಷ್ಟ್ರೀಯ

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ; ದೂರು ನೀಡಲು ಹೋದ ವಿದ್ಯಾರ್ಥಿಗೆ ’ನೀನು ತುಂಬಾ ಮುದ್ದಾಗಿದ್ದೀಯ’ ಅದಕ್ಕೆ ಹಾಗೆ ಮಾಡುತ್ತಾರೆ ಎಂದ ಶಿಕ್ಷಕರು !

Pinterest LinkedIn Tumblr

ನವದೆಹಲಿ: ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ನೀಡಲು ಮುಂದಾದ ವಿದ್ಯಾರ್ಥಿಗೆ ಶಿಕ್ಷಕರು ನೀನು ತುಂಬಾ ಮುದ್ದಾಗಿದ್ದೀಯ ಯಾರು ಬೇಕಾದರೂ ಕೀಟಲೆ ಮಾಡುತ್ತಾರೆ ಎಂದು ಹಾರಿಕೆಯ ಪ್ರತಿಕ್ರಿಯೆ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ವಿವೇಕ್ ವಿವಾರ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ ಬಾಲಕನಿಗೆ ಹಿರಿಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಹಲ್ಲೆ ಮಾಡುತ್ತಿದ್ದರು. ಶಾಲಾ ವಾಹನದಲ್ಲಿ ಈ ಘಟನೆ ನಡೆದಿದ್ದು ಈ ವಿಷಯವನ್ನು ಶಿಕ್ಷಕರ ಗಮನಕ್ಕೆ ತರಲು ವಿದ್ಯಾರ್ಥಿ ದೂರು ನೀಡಿದ್ದಾನೆ. ಆದರೆ ವಿದ್ಯಾರ್ಥಿಯ ದೂರನ್ನು ಗಂಭೀರವಾಗಿ ಪರಿಗಣಿಸದ ಶಿಕ್ಷಕರು ನೀನು ತುಂಬಾ ಮುದ್ದಾಗಿದ್ದೀಯ ಅದಕ್ಕೆ ಯಾರು ಬೇಕಾದರೂ ಕೀಟಲೆ ಮಾಡುತ್ತಾರೆ ಎಂದಷ್ಟೇ ಹೇಳಿ ಸುಮ್ಮನಾಗಿದಾರೆ.

ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗುತ್ತಿದ್ದರಿಂದ ಶಾಲೆಗೆ ಹೋಗುವುದಕ್ಕೆ ವಿದ್ಯಾರ್ಥಿ ಹಿಂಜರಿಯುತ್ತಿದ್ದ. ಈ ವಿಷಯವನ್ನು ಪೋಷಕರಿಗೂ ತಿಳಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ. ಪೋಷಕರು ತಮ್ಮ ಮಗನಿಗೆ ಉಂಟಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಶಾಲೆಯ ಅಧಿಕಾರಿಗಳ ಗಮನಕ್ಕೆ ತರಲು ಯತ್ನಿಸಿದ್ದಾರೆ. ಆದರೆ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಶಾಲೆಯ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪೋಸ್ಕೋ ಕಾಯ್ದೆಯಡಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ತೋರಿದ ಶಾಲಾ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

Comments are closed.