ರಾಷ್ಟ್ರೀಯ

ಹೆಂಡತಿ ಮೇಲಿನ ಕೋಪಕ್ಕೆ ಹಸುಗೂಸು ಸೇರಿ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

Pinterest LinkedIn Tumblr


ಹೈದರಾಬಾದ್: ಹೆಂಡತಿ ಮೇಲಿನ ಕೋಪಕ್ಕೆ ಕಟುಕ ಪತಿ 3 ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಮನೆಯ ಸಮೀಪದ ಹೊಳೆಯಲ್ಲಿ ಆರು ವರ್ಷದ, ಮೂರು ವರ್ಷದ ಹಾಗೂ 3 ತಿಂಗಳ ಮಗುವಿನ ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯ ಜನರು ಆಘಾತಕ್ಕೊಳಗಾಗಿದ್ದರು. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಮೂರು ದೇಹಗಳನ್ನು ನದಿಯಿಂದ ಹೊರತೆಗೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ವೆಂಕಟೇಶ್ ಹಾಗೂ ಅಮರಾವತಿ ದಂಪತಿಗೆ ಪುನೀತ್ (6ವರ್ಷ), ಸಂಜಯ್(3ವರ್ಷ) ಹಾಗೂ ರಾಹುಲ್(3 ತಿಂಗಳ ಮಗು) ಮೂವರು ಮಕ್ಕಳು.

ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ವೆಂಕಟೇಶ್ ಅಮರಾವತಿಯನ್ನು ವಿವಾಹವಾಗಿದ್ದ. ಕಳೆದ ವಾರ ಅಮರಾವತಿ ಪತಿ ಜೊತೆ ಜಗಳವಾಡಿಕೊಂಡು ಮೂವರು ಮಕ್ಕಳೊಂದಿಗೆ ತನ್ನ ತಾಯಿ ಮನೆಗೆ ಹೋಗಿದ್ದಳು. ತದನಂತರ ವೆಂಕಟೇಶ್ ಪತ್ನಿ ಮತ್ತು ಮಕ್ಕಳನ್ನು ವಾಪಸ್ ಕರೆತರುತ್ತಿದ್ದಾಗ ದಾರಿ ಮಧ್ಯೆ ಇಬ್ಬರ ನಡುವೆ ಮತ್ತೆ ಜಗಳ ಪ್ರಾರಂಭವಾಗಿತ್ತು. ಆಗ ವೆಂಕಟೇಶ್ ಆವೇಶಭರಿತನಾಗಿ ಮೂವರು ಮಕ್ಕಳನ್ನು ಹೊಳೆಗೆ ಎಸೆದು ಬಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಸ್ವಂತ ಮಕ್ಕಳನ್ನೇ ಕಟುಕನಂತೆ ವರ್ತಿಸಿ ಕೊಲ್ಲುತ್ತಾನೆಂದು ಊಹಿಸಿಯೇ ಇರಲಿಲ್ಲ ತಾನು ಎಂದು ಅಮರಾವತಿ ಪೊಲೀಸರ ಬಳಿ ಅಲವತ್ತುಕೊಂಡಿದ್ದಾಳೆ. ಇದೀಗ ಮೂವರು ಮಕ್ಕಳನ್ನು ಕೊಂದ ಕಿರಾತಕ ಪತಿ ಕಂಬಿ ಎಣಿಸುತ್ತಿದ್ದಾನೆ.

Comments are closed.